ಮಂಗಳೂರು: ಬೋಳೂರು ಗ್ರಾಮದಲ್ಲಿ 1950ರಲ್ಲಿ ಪೈಲ್ವಾನ್ ದಿ| ದೇವಪ್ಪ ಸುವರ್ಣರು ಆಗಿನ ಕೆಲವು ಹಿರಿಯರನ್ನು ಸೇರಿಸಿಕೊಂಡು ಸ್ಥಾಪಿಸಿರುವಂತಹ ಹಳೇಯದಾದ ಶ್ರೀ ಬಾಲಾಂಜನೇಯ ಮಂದಿರವು ಜೀರ್ಣಾವಸ್ಥೆಯ ಸ್ಥಿತಿಗೆ ಬಂದಿತ್ತು. ಇದನ್ನು ಮನಗಂಡ ಇಲ್ಲಿನ ಮೀನುಗಾರ ಸಮುದಾಯದ ಕೆಲವು ತರುಣರು ಇಡೀ ಗ್ರಾಮವೇ ಆರಾಧಿಸುತ್ತಿದ್ದ ಮತ್ತು ಸುತ್ತುಮುತ್ತಲ ಪರಿಸರದ ನಿವಾಸಿಗಳು ಪ್ರಾರ್ಥನೆ-ಹರಕೆ ಸಲ್ಲಿಸುತ್ತಿದ್ದ ಈ ಮಂದಿರವನ್ನು ಸಮಗ್ರವಾಗಿ ಜೀರ್ಣೋದ್ದಾರ ಮಾಡುವ ಸಂಕಲ್ಪ ತೊಟ್ಟು, ಈ ಸಲುವಾಗಿ ಪ್ರಶ್ನಾಚಿಂತನೆ ನಡೆಸಿದಾಗ ಕೂಡಾ 'ವಿಗ್ರಹ ಮಂದಿರವು ಸಂಪೂರ್ಣ ನವೀಕರಣವಾಗಬೇಕು' ಎಂಬ ಸೂಚನೆ ಕಂಡು ಬಂತು.ಆ ಪ್ರಯುಕ್ತ ಗ್ರಾಮದ ನಿವಾಸಿಗಳು ಮತ್ತು ಭಕ್ತರು ಒಟ್ಟು ಸೇರಿ, ಈ ಮಂದಿರದ ಸಮಗ್ರ ಜೀರ್ಣೋದ್ಧಾರಕ್ಕಾಗಿ 'ಶ್ರೀ ಬಾಲಾಂಜನೇಯ ಸ್ವಾಮಿ ಸೇವಾ ಟ್ರಸ್ಟ್' ಎಂಬ ಹೆಸರಿನಲ್ಲಿ ಸಮಿತಿಯೊಂದನ್ನು ರಚಿಸಿ. ಇದನ್ನು ಸರಕಾರದ ನಿಯಮ ಪ್ರಕಾರ ನೊಂದಾವಣೆಗೊಳಿಸಿ, ಸದ್ರಿ ಮಂದಿರದ ಸಮಗ್ರ ನವೀಕರಣದ ಮಹತ್ಕಾರ್ಯವನ್ನು ಬೋಳೂರು ಮೊಗವೀರ ಮಹಾಸಭಾದ ಸಮಗ್ರ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಕೈಗೆತ್ತಿಕೊಂಡಿದ್ದಾರೆ ಎಂದು ಬೋಳೂರು ಮೊಗವೀರ ಮಹಾಸಭಾ ಅಧ್ಯಕ್ಷರಾದ ಯಶವಂತ ಪಿ. ಮೆಂಡನ್ ತಿಳಿಸಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಇದೀಗ ಈ ಮಂದಿರದ ನಿರ್ಮಾಣ ಕಾರ್ಯವು ಮುಕ್ತಾಯದ ಹಂತದಲ್ಲಿದ್ದು, 'ಶ್ರೀ ಬಾಲಾಂಜನೇಯ ದೇವಸ್ಥಾನ' ಎಂಬ ಪುನರ್ನಾಮದಲ್ಲಿ ಲೋಕಾರ್ಪಣೆಗೆ ಸಿದ್ಧವಾಗಿದೆ. ಈ ಸಲುವಾಗಿ ಮಾರ್ಚ್ ದಿನಾಂಕ 30ರಂದು ಸಂಜೆ ಗಂಟೆ 3.30ಕ್ಕೆ ನೂತನ ವಿಗ್ರಹದ ಪುರ ಪ್ರವೇಶ ಮತ್ತು ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಅಯೋಧ್ಯೆಯ ಶ್ರೀ ರಾಮಲಲ್ಲಾನ ವಿಗ್ರಹ ರಚಿಸಿರುವ ಮೈಸೂರಿನ ಖ್ಯಾತ ಶಿಲ್ಪಿ ಶ್ರೀ ಅರುಣ್ ಯೋಗಿರಾಜ್ ಅವರೇ ನಮ್ಮ ಶ್ರೀ ಬಾಲಾಂಜನೇಯ ವಿಗ್ರಹವನ್ನು ರೂಪಿಸಿರುತ್ತಾರೆ. ಮುಂದೆ ಎಪ್ರಿಲ್ ದಿನಾಂಕ 3 ರಿಂದ ವಿವಿಧ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಎಪ್ರಿಲ್ ದಿನಾಂಕ 6ರ ಶ್ರೀರಾಮ ನವಮಿಯಂದು ನೂತನ ಶಿಲಾ ವಿಗ್ರಹದ ಪುನರ್ ಪ್ರತಿಷ್ಠೆ ಮತ್ತು ನೂತನ ದೇವಸ್ಥಾನದಲ್ಲಿ ಬ್ರಹ್ಮ ಕಲಶೋತ್ಸವ ನೆರವೇರಲಿದೆ.
ಈ ಸಂದರ್ಭ ಮಂದಿರದ ಅಮೃತ ಮಹೋತ್ಸವವು ಕೂಡಾ ನಡೆಯಲಿದ್ದು, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅನ್ನ ಸಂತರ್ಪಣೆಯೂ ಜರಗಲಿದೆ. ಸಾಮೂಹಿಕ ಹನುಮಾನ್ ಚಾಲೀಸ ಪಠಣ, ಏಕಕಾಲದಲ್ಲಿ ದಶತಂಡಗಳ ಕುಣಿತ ಭಜನೆಯೂ ಸಂಪನ್ನವಾಗಲಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಂಜನ್ ಎಸ್. ಕಾಂಚನ್, ಜಗದೀಶ ಬಂಗೇರ, ಅರುಣ್ ಮೆಂಡನ್,ಯಶವಂತ ಬೋಳೂರು, ಸುಭಾಷ್ ಕುಂದರ್ , ಸಚ್ಚಿನ್ ಪಾಲ್, ಶಿವ ಪ್ರಸಾದ್ ಉಪಸ್ಥಿತರಿದ್ದರು.