ದಕ್ಷಿಣ ಕನ್ನಡ: ಕಾಂಞಂಗಾಡ್-ಕಾಣಿಯೂರು ರೈಲ್ವೇ ಮಾರ್ಗ ನಿರ್ಮಾಣದ ಸಲುವಾಗಿ ಕರ್ನಾಟಕ ಮುಖ್ಯಮಂತ್ರಿಗಳ ಜೊತೆಗೆ ಮಾತನಾಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರನ್ನು ಕೇರಳ ನಿಯೋಗವೊಂದು ಭೇಟಿಯಾಗಿ ಮನವಿ ಸಲ್ಲಿಸಿದೆ.
ಕೇರಳದ ಕಾಂಞಂಗಾಡ್‌ನಿಂದ ಕರ್ನಾಟಕದ ಕಾಣಿಯೂರು ಎಂಬಲ್ಲಿಗೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೇ ಮಾರ್ಗ ಯೋಜನೆಯು ಅಂದಿನಿಂದ ಇಂದಿನತನಕ ಅಭಿವೃದ್ಧಿ ಕಾಣದೆ ನೆನೆಗುದಿಗೆ ಬಿದ್ದಿದೆ. ಈ ವಿಚಾರದಲ್ಲಿ ಕರ್ನಾಟಕ ಸರಕಾರದ ಜೊತೆ ಮಾತುಕತೆ ನಡೆಸುವ ಉದ್ದೇಶದಿಂದ ರೈಲ್ವೇ ಹೋರಾಟ ಸಮಿತಿ ನಿಯೋಗವೊಂದು ಪುತ್ತೂರು ಶಾಸಕರಾದ ಅಶೋಕ್ ರೈ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆ ಈ ವಿಚಾರದಲ್ಲಿ ಚರ್ಚೆ ನಡೆಸುವ ಸಲುವಾಗಿ ಶಾಸಕರಿಗೆ ಮನವಿ ಸಲ್ಲಿಸಿದರು.
2008ರಲ್ಲಿ ಕಾಂಞಂಗಾಡ್-ಕಾಣಿಯೂರು ರೈಲ್ವೇ ಹೊಸ ಮಾರ್ಗಕ್ಕೆ ಕೇಂದ್ರ ರೈಲ್ವೇ ಇಲಾಖೆ ಅನುಮೋದನೆಯನ್ನು ನೀಡಿದೆ. ಕಾಮಗಾರಿಗೆ ಡಿಪಿಆರ್ ಸಿದ್ದಪಡಿಸಿ ಆ ಬಳಿಕ ಕೇಂದ್ರ ಸರಕಾರ 1350 ಕೋಟಿ ರೂ. ಯೋಜನೆಯನ್ನು ಸಿದ್ದಪಡಿಸಬೇಕಿದೆ. ಇದರಲ್ಲಿ 650 ಕೋಟಿ ರೂ. ಕೇರಳ ಮತ್ತು ಕರ್ನಾಟಕ ರಾಜ್ಯ 50-50 ಅನುದಾನವನ್ನು ನೀಡಬೇಕಿದೆ.
ಕೇರಳ ಸರಕಾರ ಈಗಾಗಲೇ 320 ಕೋಟಿ ರೂ. ಅನುದಾನವನ್ನು ನೀಡಲು ಒಪ್ಪಿದೆ. ಆದರೆ ಕರ್ನಾಟಕ ಸರಕಾರದಿಂದ ಸಿಗಬೇಕಾದ 325 ಕೋಟಿ ರೂ ಅನುದಾನದ ಬಗ್ಗೆ ಇನ್ನೂ ಕರ್ನಾಟಕ ಸರಕಾರದ ಜೊತೆ ಮಾತುಕತೆ ನಡೆದಿಲ್ಲ. ಕರ್ನಾಟಕ ಸರಕಾರದ ಜೊತೆ ಮಾತುಕತೆಯು ಮುಂದಿನ ವಾರ ನಡೆಯಲಿದ್ದು ರೈಲ್ವೇ ಹೋರಾಟ ಸಮಿತಿ ಮತ್ತು ಶಾಸಕ ಅಶೋಕ್ ರೈ ಅವರು ಜಂಟಿಯಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದೆ.
ಕಾಂಞಂಗಾಡ್- ಮೀನೋತ್- ಕೊಟ್ಟೋಡಿ-ಬಳತ್ತೋಡು- ಪಾಣಣತ್ತೂರು ಮೂಲಕ ಕರ್ನಾಟಕದ ಕಲ್ಲಪಳ್ಳಿ- ಸುಳ್ಯ-ಬೆಳ್ಳಾರೆ- ಕಾಣಿಯೂರುಗೆ ಈ ರೈಲ್ವೇ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಸುಮಾರು 91 ಕಿಮೀ ಉದ್ದದ ಈ ರೈಲ್ವೇ ಮಾರ್ಗಕ್ಕೆ 1350 ಕೋಟಿ ಅನುದಾನ ಬೇಕಾಗುತ್ತದೆ. ಕೇಂದ್ರ ಸರಕಾರ, ಕೇರಳ ಮತ್ತು ಕರ್ನಾಟಕ ಸರಕಾರ ಜಂಟಿಯಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ.
ನಿಯೋಗದಲ್ಲಿ ಹೋರಾಟ ಸಮಿತಿಯ ಬೆಟ್ಟ ಜಯರಾಂ, ನ್ಯಾಯವಾದಿ ಎಂ.ಸಿ.ಜೋಶ್, ಎ.ಹಮೀದ್ ಹಾಜಿ, ಸೂರ್ಯ ನಾರಾಯಣ ಭಟ್, ಕುಂಞಿ ಕಣ್ಣನ್, ಮೊಹಮ್ಮದ್ ಇದ್ದರು.