ಉಡುಪಿ : ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪ ಸಂಬಂಧ ಮರಕ್ಕೆ ಕಟ್ಟಿ ಹಲ್ಲೆ ನಡೆಸಿರುವ ಘಟನೆ ಸಂಬಂಧ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ಹಲ್ಲೆಗೊಳಗಾದ ಸಂತ್ರಸ್ತ ಮಹಿಳೆಯು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ.
ತಮ್ಮ ಸಮುದಾಯದ ಜನರ ಜೊತೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಹಲ್ಲೆಗೊಳಗಾದ ಮಹಿಳೆಯು, ರಾಜಿ ಮಾಡಿಕೊಂಡಿದ್ದೇವೆ. ಈ ಪ್ರಕರಣ ಹಿಂಪಡೆಯಿರಿ ಎಂದು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮೀನು ಕದ್ದ ಸಂಬಂಧ ಅದೇ ದಿನ ರಾತ್ರಿ ರಾಜಿ ಮಾಡಿಕೊಂಡಿದ್ದೆವು. ಮರುದಿನ ಅವರು ಫೋನ್ ಮಾಡಿದರು. ಆದರೆ ನಮ್ಮ ಮನೆಯಲ್ಲಿ ಯಾರೂ ಇಲ್ಲದ ಕಾರಣ ನಾನು ಠಾಣೆಗೆ ಹೋಗಲಿಲ್ಲ. ಆಗ ಅವರೇ ಆಟೋರಿಕ್ಷಾ ಮಾಡಿಕೊಂಡು ಬಂದು ನನ್ನನ್ನು ಕರೆದುಕೊಂಡು ಹೋಗಿ ನಿನ್ನೆ ರಾಜಿಯಾಗಿದ್ದಕ್ಕೆ ಹೆಬ್ಬುಟ್ಟು ಹಾಕು ಅಂದ್ರು, ಅದಕ್ಕೆ ಹೆಬ್ಬೆಟ್ಟು ಹಾಕಿದ್ದೆ. ನನಗೆ ಓದಲು ಬರಲ್ಲ. ಮುಂದೆ ಏನಾಗಿದೆ ಅಂತಾ ನನಗೆ ಗೊತ್ತಿಲ್ಲ ಎಂದು ಮಹಿಳೆ ಲಕ್ಷ್ಮೀ ಬಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂತ್ರಸ್ತೆಯ ಜೊತೆಗೆ ಸ್ಥಳೀಯ ಬಂಜಾರ ಕಾರ್ಮಿಕರು ಕೂಡ ಧ್ವನಿಗೂಡಿಸಿದ್ದಾರೆ. ನಮ್ಮ ಊರಿಗಿಂತ ಇಲ್ಲಿ ಒಳ್ಳೆಯ ಜೀವನ ನಡೆಸುತ್ತಿದ್ದೇವೆ. ಇಲ್ಲಿ ನಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಕ್ಕಿದೆ. ಮಲ್ಪೆ ಬಂದರಿನಲ್ಲಿ ಪಂಚಾಯಿತಿ ವ್ಯವಸ್ಥೆ ಇದೆ. ಅಲ್ಲೇ ಈ ಪ್ರಕರಣ ತೀರ್ಮಾನವಾಗಿದೆ. ಬಂದರಿನಲ್ಲಿ ಪ್ರತಿದಿನ ಕಳ್ಳತನ ಆಗುತ್ತದೆ. ಎಲ್ಲವನ್ನೂ ಎಫ್ಐಆರ್ ಮಾಡಲು ಆಗಲ್ಲ. ಇಲ್ಲೇ ರಾಜಿ ಮಾಡಿಕೊಳ್ಳುತ್ತೇವೆ. ಇದರಲ್ಲಿ ರಾಜಕೀಯ ತರುವುದು ಬೇಡ. ಈ ಪ್ರಕರಣದಲ್ಲಿ ಕಾಣದ ಕೈ ಬಂದಿದೆ. ಇದನ್ನು ಇಲ್ಲೇ ಸರಿಪಡಿಸಿ ಎಂದು ಮಂಜುನಾಥ್ ಒತ್ತಾಯ ಮಾಡಿದ್ದಾರೆ.
ಮೀನುಗಾರಿಕೆಗೆ ತೆರಳಿದ್ದ ಬೋಟ್ನಿಂದ ಬಂದರಿನಲ್ಲಿ ಮಾರ್ಚ್ 18 ರಂದು ಮೀನು ಖಾಲಿ ಮಾಡುತ್ತಿದ್ದ ವೇಳೆ ವಿಜಯನಗರ ಜಿಲ್ಲೆಯ ಮಹಿಳೆ ದುಬಾರಿ ಬೆಲೆಯ ಸಿಗಡಿ ಮೀನು ಕದ್ದ ಆರೋಪ ಕೇಳಿಬಂದಿತ್ತು. ಮೀನು ಕದ್ದದ್ದನ್ನು ವಿಚಾರಣೆ ಮಾಡಿದಾಗ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಮಹಿಳೆ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಸಂಬಂಧ ಭಾರೀ ಟೀಕೆ ವ್ಯಕ್ತವಾಗಿತ್ತು.
ಆ ಬಳಿಕ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ನಾಲ್ವರನ್ನು ಬಂಧಿಸಿದ್ದರು. ಸದ್ಯ ಈ ಪ್ರಕರಣ ವಾಪಸ್ ಪಡೆಯುವಂತೆ ಸಂತ್ರಸ್ತ ಮಹಿಳೆ ಮತ್ತು ಸಮುದಾಯದವರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.