ಮಂಗಳೂರು: ಕುಂಬಳೆ ಸೀಮೆಯ ಹಾಗೂ ಉತ್ತರ ಕೇರಳದ ಪ್ರಸಿದ್ದ ದೇವಾಲಯವಾದ ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ – ಮೂಡಪ್ಪ ಸೇವೆಯ ಸಿದ್ದತೆ ಪ್ರಾರಂಭವಾಗಿದೆ. ಮಲಬಾರ್ ದೇವಸ್ವಮ್ ಮಂಡಳಿಯ ರೂಪೀಕರಿಸಿದ ನವೀಕರಣ ಸಮಿತಿಯು ಕ್ಷೇತ್ರದ ನವೀಕರಣದ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದು ಈಗ ಎಲ್ಲಾ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು ಇದೇ ಬರುವ ಮಾರ್ಚ್ 27 ರಿಂದ ಏಪ್ರಿಲ್ 7ರ ತನಕ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶ ಮತ್ತು ಮೂಡಪ್ಪ ಸೇವೆ ಇತ್ಯಾದಿ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಧುಸೂಧನ್ ಅಯಾರ್ ರವರು ತಿಳಿಸಿದ್ದಾರೆ. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಾರ್ಯಕ್ರಮದ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಹಗಲಿರುಳು ಪೂರ್ವಭಾವಿ ತಯಾರಿ ನಡೆಸಲು ಶ್ರಮಿಸುತ್ತಿವೆ. ಸೀಮೆಯ ವಿವಿಧ ಭಾಗಗಳಿಂದ ಹಾಗು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ವಿಟ್ಲ, ಸುಳ್ಯ ಮೊದಲಾದ ಸ್ಥಳಗಳಿಂದ ಕರಸೇವಕರು ಕ್ಷೇತ್ರಕ್ಕೆ ಆಗಮಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸುಮಾರು 10 ಕೋಟಿ ರೂಗಳ ಯೋಜನೆಯನ್ನು ತಯಾರಿಸಲಾಗಿದೆ. ಕ್ಷೇತ್ರದ ಭಕ್ತಾಭಿಮಾನಿಗಳು ಉದಾರವಾಗಿ ನೀಡುವ ದೇಣಿಗೆಯೇ ನಮಗೆ ಶ್ರೀರಕ್ಷೆ
ಕ್ಷೇತ್ರದ ನವೀಕರಣ ಕಾಮಗಾರಿಗಳಿಗೆ ಇದೀಗ ಸುಮಾರು 24 ಕೋಟಿ ರೂಗಳನ್ನು ಖರ್ಚು ಮಾಡಲಾಗಿದೆ. ಇದರ ಫಲವಾಗಿ ಕ್ಷೇತ್ರವು ಇಂದು ಸುಂದರವೂ ಭವ್ಯವೂ ಆಗಿ ಕಂಗೊಳಿಸುತ್ತಿದೆ. ಪ್ರಧಾನ ದೇಗುಲದ ನವೀಕರಣ, ಉಪದೇವತೆಗಳ `ಗುಡಿಗಳ ನವೀಕರಣ, ಶಿಲಾಮಯ ವೀರಭದ್ರನ ಗುಡಿ ನಿರ್ಮಾಣ, ಸುತ್ತು ಪೌಳಿಗಳ ದುರಸ್ಥಿ ಕಾರ್ಯ, ಪೌಳಿಗಳ ನೆಲಕ್ಕೆ ಗ್ರಾನೈಟ್ ಅಳವಡಿಸುವಿಕೆ, ಒಳ ಅಂಗಣಕ್ಕೆ ಕಗ್ಗಲ್ಲಿನ ಚಪ್ಪಡಿಗಳನ್ನು ಅಳವಡಿಸುವಿಕೆ, ಒಳ ಚರಂಡಿ ಕಾಮಗಾರಿ, ಗಣಪತಿ ದೇವರ ಮುಖಮಂಟಪ, ಶಿವ ದೇವರ ನಡೆ, ರಾಜಾಂಗಣ, ನವೀಕರಣ, ನೈವೇದ್ಯ ಕೋಣೆಯ ಪುನರ್ನಿಮಾರ್‌ಣ, ಅಣ್ಣ ಛತ್ರ, ಯಾತ್ರಿ ನಿವಾಸ, ಸೇವಾ ಕೌಂಟರ್. ಶಿಲಾಮಯ ಸುಂದರ ಮಹಾದ್ವಾರ, ಹೊರಾಂಗಣಕ್ಕೆ ಚಪ್ಪಡಿ ಹಾಗೂ ಇಂಟರ್ ಲಾಕ್ ಅಳವಡಿಸುವ ಕೆಲಸ, ವೇಸ್ಟ್ ವಾಟರ್ ಮ್ಯಾನೇಜೆಂಟ್ ಪ್ಲಾಂಟ್, ಪಶ್ಚಿಮ ಭಾಗದ ಕಾಂಪೌಂಡ್ ವಾಲ್, ಮೂಲಸ್ಥಾನದಲ್ಲಿ ಸವಾರಿ ಕಟ್ಟೆಯ ನವೀಕರಣ, ಪಂಜುರ್ಲಿ ಗುಡಿ, ಮದರು ಮಂಟಪ ನಿರ್ಮಾಣ ಇತ್ಯಾದಿ ಹಲವು ಕಾಮಗಾರಿಗಳನ್ನು ನವೀಕರಣ ಸಮಿತಿಯು ನಿರ್ವಹಿಸಿದೆ. ಭಕ್ತರು ನವೀಕರಣಕ್ಕೆ ನೀಡಿದ ದೇಣಿಗೆಯಲ್ಲದೆ ಮಲಬಾರ್ ದೇವಸ್ವಮ್ ಬೋರ್ಡ್, ಭಕ್ತಜನ ಸಮಿತಿ, ಸಿದ್ಧಿವಿನಾಯಕ ಸೇವಾ ಸಮಿತಿಗಳು ಸಹ ಸಹಾಯಧನ ನೀಡಿವೆ.
ಯತಿ ಶ್ರೇಷ್ಠರಾದ ಎಡನೀರು ಸ್ವಾಮೀಜಿ, ಮಾಣಿಲದ ಸ್ವಾಮೀಜಿ, ಒಡಿಯೂರು ಸ್ವಾಮೀಜಿ, ಕೊಂಡೆವೂರು ನೀಡಿರುವರು ರಾಮಚಂದ್ರಾಪುರ ಮಠದ ಸ್ವಾಮೀಜಿ, ಆನೆಗುಂದಿ ಮಹಾಸಂಸ್ಥಾನದ ಸ್ವಾಮೀಜಿ ಉಡುಪಿ ಅಷ್ಟಮಠದ ಸ್ವಾಮೀಜಿಯವರು ತಮ್ಮ ಬೆಂಬಲ ಹಾಗೂ ಆಶೀರ್ವಾದ ನೀಡಿರುವರು ಎಂದು ತಿಳನಿರೀಕ್ಷೆಯಿದ್ದು ಕಾರ್ಯಕ್ರಮಕ್ಕೆ ಬೇರೆ ಬೇರೆ ಭಾಗಗಳಿಂದ ಸುಮಾರು ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದೆ ವಾಹನ ಪಾರ್ಕಿಂಗ್ ಮಾಡಲು ಮಧೂರು ಬಯಲು, ಕೊಟ್ಟ ಬಯಲು, ಕೊಟ್ಟ ಎರಿಕ್ಕಳ ಬಯಲು, ಚೆನಕ್ಕೊಡು ಬಯಲುಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ವಿ.ಐ.ಪಿಗಳ ವಾಹನಗಳಿಗೆ ಪಾಸ್ ನೀಡಲಾಗುವುದು ಬಸ್ ಸೌಕರ್ಯ ಪರಕ್ಕಿಲ ತನಕ ಮಾತ್ರ ಇರುವುದು ನಡೆದು. ಬರಲು ಅಶಕ್ತರಾದವರಿಗೆ ವಿಶೇಷ ವಾಹನ ಸೌಕರ್ಯ ಕಲ್ಪಿಸುವ ಆಲೋಚನೆ ಇದೆ. ಆರೋಗ್ಯ ಇಲಾಖೆ ಮತ್ತು ವಿವಿಧ ಆಸ್ಪತ್ರೆಗಳ ಸಹಕಾರದಿಂದ 24 ಘಂಟೆಗಳ ಕಾಲ ಆರೋಗ್ಯಕ್ಕೆ ಸಂಬಂಧಿಸಿದ ಸೇವೆ ಒದಗಿಸಲಾಗುವುದು ಎಂದರು.
ಕ್ಷೇತ್ರದ ಈಶಾನ್ಯ ಭಾಗದಲ್ಲಿರುವ ಕೊಲ್ಯದ ಬಯಲಿನ ಬಲಭಾಗದಲ್ಲಿ ಬೃಹತ್ ಜರ್ಮನ್ ಟೆಂಟ್ ಚಪ್ಪರಗಳು ತಲೆ ಎತ್ತಿವೆ. ಇಲ್ಲಿ ಎರಡು ವೇದಿಕೆಗಳು, ಪಾಕಶಾಲೆ, ಉಗ್ರಾಣ ಮೊದಲಾದ ವ್ಯವಸ್ಥೆಗಳಲ್ಲದೆ ಭಕ್ತರಿಗೆ ಅನ್ನಪ್ರಸಾದ ವಿತರಣೆಯ ಸೌಕರ್ಯವನ್ನು ಏರ್ಪಡಿಸಲಾಗಿದೆ. ಕುಳಿತು ಊಟ ಮಾಡುವ ಮತ್ತು ಬಫೆಟ್ ವ್ಯವಸ್ಥೆಯ ಊಟದ ವ್ಯವಸ್ಥೆಗಳಿವೆ. ಈಗಾಗಲೇ ಊಟದ ಪ್ಲೇಟುಗಳನ್ನು ಸಂಗ್ರಹಿಸಲಾಗಿದೆ. ಹೊರೆಕಾಣಿಕೆಯಲ್ಲಿ ಊಟದ ಎಲೆ ತರಕಾರಿಗಳು ಧಾರಾಳ ಬರುವ ನಿರೀಕ್ಷೆ ಇದೆ. ಕ್ಷೇತ್ರದ ತೆಂಕು ಭಾಗದ ಪದಾರ್ಥಿ ಬಯಲಿನಲ್ಲಿ ಒಂದು ವೇದಿಕೆ ಮತ್ತು ಊಟದ ಹಾಲ್ ಮತ್ತು ಪಾಕಶಾಲೆಯ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ವಿ.ಐ.ಪಿಗಳಿಗೂ ಪ್ರಸಾದ ಭೋಜನ ವ್ಯವಸ್ಥೆಯನ್ನು ಮಾಡಲಾಗುವುದು. ಎಲ್ಲಾ ಪಾಕಶಾಲೆಗಳ ಮೆನು ಒಂದೇ ಆಗಿರುವುದು. ಕ್ಷೇತ್ರದ ಪೂರ್ವ ಪ್ರವೇಶದ ಸಮೀಪ 'ಭಜನಾ ವೇದಿಕೆ' ಇರುತ್ತದೆ. ಪ್ರಧಾನ ವೇದಿಕೆಗೆ ಪ್ರವೇಶಿಸುವ ದ್ವಾರದ ಬಲಭಾಗದಲ್ಲಿ ಸ್ವಲ್ಪ ಜಾಗವನ್ನು ಫೈರ್ ಫೋರ್ಸ್ ಹಾಗೂ ಪೊಲೀಸ್ ವಾಹನಗಳಿಗೆ ಮೀಸಲಿಡಲಾಗಿದೆ ಎಂದರು.ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಅನ್ನಪ್ರಸಾದ ವ್ಯವಸ್ಥೆ ಇರುವುದು. 24 ಗಂಟೆಗಳ ಕಾಲ ಕ್ಯಾಂಟೀನ್ ಚಾಲ್ತಿಯಲ್ಲಿರುವುದು,
ಮನೆಮನೆಗಳಿಗೆ ಆಮಂತ್ರಣ ತಲುಪಿಸಿ ದೇಣಿಗೆ ಸಂಗ್ರಹ ಮಾಡುವ ಕೆಲಸ ಪ್ರಾದೇಶಿಕ ಸಮಿತಿಗಳ ನೇತೃತ್ವದಲ್ಲಿ ನಡೆದಿವೆ. 26 ಮಾರ್ಚ್ 2025ರಂದು ಸಂಜೆ 03:00 ಗಂಟೆಗೆ ಮಧೂರು ಪಂಚಾಯತ್ ವ್ಯಾಪ್ತಿಯ ಹೊರೆಕಾಣಿಕೆ ಕ್ಷೇತ್ರಕ್ಕೆ ಸಮರ್ಪಣೆ ಆಗಲಿದೆ. ಬಳಿಕ ಬೇರೆ ಬೇರೆ ಪ್ರದೇಶಗಳಿಂದ ಹೊರೆಕಾಣಿಕೆ ಕ್ಷೇತ್ರಕ್ಕೆ ಪ್ರವಾಹೋಪಾದಿಯಲ್ಲಿ ಬರುವ ನಿರೀಕ್ಷೆ ಇದೆ. ಕೇಂದ್ರದ, ರಾಜ್ಯದ ಹಾಗೂ ಕರ್ನಾಟಕದ ಪ್ರಧಾನ ನೇತಾರರು ಮತ್ತು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಯತಿವರೇಣ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಲಿರುವರು. ಖ್ಯಾತ ಶಿಲ್ಪಿ ಎಸ್. ಎಂ. ಪ್ರಸಾದ್ ಮತ್ತು ಅವರ ಸಹಾಯಕ ಶ್ರೀ ಜಗನ್ನಿವಾಸ ರಾವ್ ಶಿಲ್ಲಿ ಶಾಸ್ತ್ರದ ಸೇವೆಯನ್ನೂ ದೇರೆಬೈಲು ಶಿವಪ್ರಸಾದ ತಂತ್ರಿ ಮತ್ತು ಉಳಿಯತ್ತಾಯ ವಿಷ್ಣು ಅಸ್ತ್ರ ಇವರು ತಾಂತ್ರಿಕ ವಿಭಾಗದಲ್ಲಿ ಸಹಕರಿಸಲಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ತಿಕ್ ಶೆಟ್ಟಿ ಮಜಿಬೈಲು,ಸುಕುಮಾರ್ ಕುದ್ರೆಪಾಡಿ,ರಾಜೇಶ್ ಮಾಸ್ಟರ್ ಅಗಲ್ಪಾಡಿ,ವಿಜಯ್ ರೈ ಮಲ್ಲಂಗೈ ಹಾಗೂ ಚಂದ್ರಕಾಂತ್ ಶೆಟ್ಟಿ ಉಪಸ್ಥಿತರಿದ್ದರು.