ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.1ರಿಂದ 22ರವರೆಗೆ ನಡೆಯುವ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಭಕ್ತರಿಗೆ ಅನ್ನದಾನ ಮಾಡಲು ತಾತ್ಕಾಲಿಕ ಚಪ್ಪರಕ್ಕೆ ಮುಹೂರ್ತ ನೆರವೇರಿಸಲಾಯಿತು.
ದೇವಳದ ಕೆರೆಯ ಬಳಿ 20 ಸಾವಿರ ಚದರ ಅಡಿಯ ಚಪ್ಪರ ನಿರ್ಮಿಸಿ ಅನ್ನಪ್ರಸಾದ ವಿತರಿಸಲು ದೇವಳದ ವ್ಯವಸ್ಥಾಪನಾ ಸಮಿತಿ ತೀರ್ಮಾನಿಸಿದ್ದು, ದೇವಾಲಯದಲ್ಲಿ ಬೆಳಿಗ್ಗೆ ಪೂಜೆ, ನಿತ್ಯ ಬಲಿಯ ಬಳಿಕ ದೇವಳದ ಕೆರೆಯ ನೈರುತ್ಯ ಭಾಗದಲ್ಲಿ ಚಪ್ಪರ ಮುಹೂರ್ತ ನಡೆಯಿತು. ದೇವಳದ ಪ್ರಧಾನ ಅರ್ಚಕ ವಸಂತ ಕೆದಿಲಾಯ ಪೂಜಾ ವಿಧಿ-ವಿಧಾನ ನೆರವೇರಿಸಿದರು. ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೇಡೆಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ ಅವರು ಚಪ್ಪರ ಮುಹೂರ್ತ ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವಾಸ್ತು ಎಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್, ದೇವಳದ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯೆ ವೀಣಾ ಬಿ.ಕೆ., ಯಕ್ಷಧ್ರುವ ಪಟ್ಟ ಫೌಂಡೇಷನ್ ಟ್ರಸ್ಟ್‌ನ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲ, ಉಪಾಧ್ಯಕ್ಷ ನುಳಿಯಾಲು ರವೀಂದ್ರ ಶೆಟ್ಟಿ, ಟ್ರಸ್ಟಿಗಳಾದ ನೋಣಾಲು ಜೈರಾಜ್ ಭಂಡಾರಿ, ಎಂ.ದತ್ತಾತ್ರೆಯ ರಾವ್, ಜಯಕುಮಾರ್ ರೈ ಮಿತ್ರಂಪಾಡಿ, ಚಂದ್ರಹಾಸ ರೈ, ನುಳಿಯಾಲು ಸುಜೀರ್ ಶೆಟ್ಟಿ ಭಾಗವಹಿಸಿದ್ದರು.