ಮಂಗಳೂರು: ಮೊದಲು ಮನೆಗಳು ಬದಲಾವಣೆಯಾಗಬೇಕು ನಂತರ ಮನಗಳು ಬದಲಾವಣೆಯಾಗುತ್ತದೆ. ಮನೆಗಳಲ್ಲಿ ಬದಲಾವಣೆ ಆಗಬೇಕಾದರೆ ಮನೆಯ ಹೆಣ್ಣುಮಕ್ಕಳು ಸಶಕ್ತರಾಗಬೇಕು. ಮಹಿಳೆಯರನ್ನು ಸಶಕ್ತಗೊಳಿಸುವ ಕೆಲಸ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮುಂದೆಯೂ ಮಾಡುವ ಮುಖಾಂತರ ದೇಶದಲ್ಲಿ ಹೆಸರು ಮಾಡಲಿ" ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದರು. ಅವರು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನವೋದಯ ಸ್ವಸಹಾಯ ಗುಂಪುಗಳ ಸದಸ್ಯೆಯರಿಗೆ ಸಮವಸ್ತ್ರ ವಿತರಣಾ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿ, ಇಂದಿನ ಬೆಳವಣಿಗೆಗೆ ತಕ್ಕಂತೆ ಬದಲಾವಣೆಗೊಂಡು ಗ್ರಾಹಕ ಸ್ನೇಹಿಯಾಗಿರುವ ಎಸ್ ಸಿಡಿಸಿಸಿ ಬ್ಯಾಂಕ್ ದೇಶಕ್ಕೆ ಮಾದರಿ ಎಂದರು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತಾಡಿ, "ಕೊರೋನ ಸಂದರ್ಭದಲ್ಲಿ ಎಂ.ಎನ್. ರಾಜೇಂದ್ರ ಕುಮಾರ್ ಅವರು ಕ್ವಾರಂಟೈನ್ ಮಾಡಲು ತಮ್ಮ ಕಟ್ಟಡಗಳನ್ನು ಜಿಲ್ಲಾಡಳಿತಕ್ಕೆ ಬಿಟ್ಟುಕೊಡುವ ಮೂಲಕ ಜನಪರ ಕಾಳಜಿಯನ್ನು ತೋರಿಸಿದವರು. ಹೆಣ್ಣುಮಕ್ಕಳು ಆರ್ಥಿಕವಾಗಿ ಸಶಕ್ತರಾಗಬೇಕು ಆ ಮೂಲಕ ಸಮಾಜ ಸದೃಢಗೊಳ್ಳಬೇಕು ಎಂಬ ದೃಷ್ಟಿಯಿಂದ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಸಮಾಜದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿರುವ ಅವರಿಗೆ ಭಗವಂತ ಆಯುಷ್ಯ ಆರೋಗ್ಯ ಕೊಡಲಿ" ಎಂದು ಹೇಳಿದರು
ಅಧ್ಯಕ್ಷತೆ ವಹಿಸಿ ಮಾತಾಡಿದ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್.ರಾಜೇಂದ್ರ ಕುಮಾರ್ ಅವರು, "2000ನೇ ಇಸವಿಯಲ್ಲಿ ನವೋದಯ ಸ್ವಸಹಾಯ ಸಂಘ ಸ್ಥಾಪಿಸುವಾಗ 9500 ಮಂದಿ ಮಹಿಳೆಯರು ಪಾಲ್ಗೊಳ್ಳುವ ಮೂಲಕ ನಮಗೆ ಶಕ್ತಿ ತುಂಬಿದರು. ಇಂದು ಸುಮಾರು 5 ಲಕ್ಷ ಮಂದಿ ಮಹಿಳೆಯರು ಇದರಲ್ಲಿ ಜೋಡಣೆಯಾಗಿದ್ದು ಎಂಟು ಜಿಲ್ಲೆಗಳಲ್ಲಿ ವಿಸ್ತರಣೆಗೊಂಡಿದೆ. ಮೇ ತಿಂಗಳಲ್ಲಿ ಸಂಘಕ್ಕೆ 25 ವರ್ಷ ತುಂಬುತ್ತದೆ. ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಸದಸ್ಯೆಯರು ಒಂದೇ ಸಮವಸ್ತ್ರದಲ್ಲಿ ಪಾಲ್ಗೊಳ್ಳುವ ಮೂಲಕ ದೇಶಕ್ಕೆ ಮಾದರಿಯಾಗಲಿದ್ದಾರೆ.
ವೇದಿಕೆಯಲ್ಲಿ ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಕಿಶೋರ್ ಆಳ್ವ, ಬ್ಯಾಂಕ್ ನಿರ್ದೇಶಕರಾದ ವಿನಯ್ ಕುಮಾರ್ ಸೂರಿಂಜೆ, ಜಯರಾಮ ರೈ ಬಳಜ್ಜ, ಭಾಸ್ಕರ್ ಕೋಟ್ಯಾನ್, ಶಶಿಕುಮಾರ್ ರೈ ಬಾಲ್ಯೊಟ್ಟು, ಸಿಇಓ ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ನಿತೀಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.