ಪುತ್ತೂರು: ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾವನೆ ಆಗಿದೆ. ನಾನು ಶಾಸಕಿಯಾಗಿದ್ದ ಅವಧಿಯಲ್ಲಿ ಹಾಕಿದ ಬೀಜ ಇಂದು ಮೊಳಕೆ ಒಡೆಯಲಾರಂಭಿಸಿದೆ. ಬಜೆಟ್‌ನಲ್ಲಿ ಒಂದು ಬಾರಿ ಪ್ರಸ್ತಾಪವಾದರೆ ಅದು ಜಾರಿಯಾಗುತ್ತದೆ. ಮೆಡಿಕಲ್ ಕಾಲೇಜು ನಿರ್ಮಾಣವಾಗುವಾಗ ಪುತ್ತೂರು ಇನ್ನಷ್ಟು ಅಭಿವೃದ್ಧಿಯಾಗುತ್ತದೆ ಎಂದು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಹೇಳಿದ್ದಾರೆ.
ಪುತ್ತೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರಂಭದಲ್ಲಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜಿಗಿಂತಲೂ ಪುತ್ತೂರು ಜಿಲ್ಲೆ ಆಗಬೇಕೆಂಬ ಹೋರಾಟ ನಡೆಯುತ್ತಿತ್ತು. ಆಗ ನಾನೂ ಜಿಲ್ಲೆ ಆಗಬೇಕೆಂದು ಹೋರಾಟಕ್ಕೆ ಇಳಿದಿದ್ದೆ. ಆ ಸಂದರ್ಭದಲ್ಲಿ ಪ್ರಥಮ ಬಾರಿಗೆ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲೆಗಳಿಗೂ ಮೆಡಿಕಲ್ ಕಾಲೇಜು ಸ್ಥಾಪಿಸುವ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದರು. ಆಗ ನಾನು ಜಿಲ್ಲೆಯ ಬದಲು ಮೆಡಿಕಲ್ ಕಾಲೇಜು ಪುತ್ತೂರಿಗೆ ನೀಡುವ ಕುರಿತು ಮುಖ್ಯಮಂತ್ರಿ ಅವರಲ್ಲಿ ಬೇಡಿಕೆಯಿಟ್ಟಿದ್ದೆ. ನಿಮ್ಮ ಕ್ಷೇತ್ರದಲ್ಲಿ 8 ಮೆಡಿಕಲ್ ಕಾಲೇಜು ಇದೆ. ಅದರ ನಡುವೆ ಇನ್ನೊಂದು ಮೆಡಿಕಲ್ ಕಾಲೇಜು ಯಾಕೆ. ಈಗ ಮೊದಲು ಒಂದೇ ಒಂದು ಮೆಡಿಕಲ್ ಕಾಲೇಜು ಇಲ್ಲದ ಜಿಲ್ಲೆಗೆ ಕೊಡುತ್ತೇನೆ. ನಿನ್ನ ಕ್ಷೇತ್ರಕ್ಕೂ ಕೊಡುತ್ತೇನೆ. ನೀನು ಮೊದಲು ಜಾಗ ಹುಡುಕಿ ಇಡು ಎಂದು ಹೇಳಿದ್ದರು. ಮೆಡಿಕಲ್ ಕಾಲೇಜಿಗೆ 40 ಎಕರೆ ಹುಡುಕಾಟ ಆರಂಭಿಸಿದ ಸಮಯ ಯಾರೂ ಜಾಗ ಕೊಡಲು ಮುಂದೆ ಬರಲಿಲ್ಲ. ಈ ಸಂದರ್ಭ ವಿಶ್ವನಾಥ ನಾಯಕ್ ಮತ್ತು ಕೌಶಲಪ್ರಸಾದ್ ಅವರು ಕ್ರಿಕೆಟ್ ಕ್ರೀಡಾಂಗಣಕ್ಕೆ ಜಾಗ ಹುಡುಕುತ್ತಿದ್ದರು. ನಾನು ಡಿಪ್ಲೊಮಾ ಕಾಲೇಜು ಮಾಡುವ ಕುರಿತು ಪ್ರಸ್ತಾಪಿಸಿದಾಗ ಮುರಳೀಧರ ರೈ ಮಠಂತಬೆಟ್ಟು ಅವರು ನಮ್ಮಲ್ಲಿ ಜಾಗ ಇದೆ ಎಂದಿದ್ದರು. ಆ ವೇಳೆ ಬನ್ನೂರು ವಿ.ಎ ಅವರು ಸೇಡಿಯಾಪು ಎಂಬಲ್ಲಿ 50 ಎಕರೆ ಕುಮಿ, ಜಾಗ ಇದೆ ಎಂದು ಹೇಳಿದರು. ಸೇಡಿಯಾಪು ಜನಾರ್ದನ ಭಟ್ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದೆ ಎಂದರು.
ಬಳಿಕ ಜನಾರ್ದನ ಭಟ್, ವಿಷ್ಣುಪ್ರಸನ್ನ ಹಾಗೂ ಸಹೋದರರು ಮೆಡಿಕಲ್ ಕಾಲೇಜಿಗಾಗಿ ಜಾಗ ಬಿಟ್ಟು ಕೊಡಲು ಒಪ್ಪಿಗೆ ನೀಡಿದ್ದರು. ಆ ಬಳಿಕ ನಾನು ನೇರವಾಗಿ ಆಗಿನ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರಲ್ಲಿಗೆ 2015ರ ಆ.24ರಂದು ತೆರಳಿ 40 ಎಕರೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು, ಶೈಕ್ಷಣಿಕ ಉದ್ದೇಶಕ್ಕಾಗಿ ಕಾದಿರಿಸಿ, ಪಹಣಿ ಪತ್ರ ಮಾಡಿಸಿದ್ದೆ ಎಂದು ಅವರು ತಿಳಿಸಿದರು.