ಮಂಗಳೂರು: ಇನೋಳಿ ಕಡೆಯಿಂದ ಮಂಗಳೂರು ಕಡೆಗೆ ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಬಸ್, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು ಸಹಿತ ಮೂರು ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ತಿಲ್ಲಿಪದವು ಬಳಿ ನಡೆದಿದೆ. ನಿಲ್ಲಿಸಿದ್ದ ವಾಹನಗಳಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಈ ಘಟನೆಗೂ ಮುಂಚೆ ತಿಬಿಪದವು ಸಮೀಪ ಬೈಕೊಂದು ಸ್ಕಿಡ್ ಆಗಿ, ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿತ್ತು. ಇದನ್ನು ನೋಡಲು ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ, ಜನ ಜಮಾಯಿಸಿದ್ದರು. ಈ ವೇಳೆ ಬಂದ ಕಾಲೇಜು ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು, ಎರಡು ಬೈಕ್‌ಗಳಿಗೆ ಸರಣಿ ಢಿಕ್ಕಿ ಹೊಡೆದು ಅಪಘಾತವನ್ನುಂಟು ಮಾಡಿದ್ದು, ಮಂಗಳೂರು ದಕ್ಷಣ ಸಂಚಾರಿ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸಿದ್ದಾರೆ.