ಉಡುಪಿ: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್, ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಕಾರ್ಕಳ ತಾಲೂಕಿನ ಬೈಲೂರು ಎರ್ಲಪಾಡಿ ಕರ್ವಾಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಭೇಟಿ ನೀಡಿ ನಾಗಪೂಜೆಯ ಸೇವೆ ಸಲ್ಲಿಸಿದರು.
ರವಿಶಾಸ್ತ್ರಿ ಅವರ ಹಿರಿಯರು ಕರ್ವಾಲು ಮೂಲದವರಾಗಿದ್ದು, 50 ವರ್ಷಗಳ ಹಿಂದೆ ರವಿಶಾಸ್ತ್ರಿ ಹಿರಿಯರು ಎರ್ಲಪಾಡಿ ತೊರೆದಿದ್ದರು. 2007ರಿಂದ ಸತತ 13 ಬಾರಿ ಎರ್ಲಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಗ ದರ್ಶನಕ್ಕೆ ಬರುತ್ತಿದ್ದಾರೆ.
ಇಷ್ಟಾರ್ಥ ಸಿದ್ಧಿಗಾಗಿ ರವಿಶಾಸ್ತ್ರಿ ದಂಪತಿ ದಶಕಗಳ ಹಿಂದೆ ಎರ್ಲಪಾಡಿಗೆ ಭೇಟಿ ನೀಡಿದ್ದರು. ನಾಗನ ಸೇವೆ ಮಾಡಿದ ನಂತರ ರವಿಶಾಸ್ತ್ರಿ ಅವರ ಇಷ್ಟಾರ್ಥ ಈಡೇರಿದ್ದರಿಂದ ಅಂದಿನಿಂದ ಈವರೆಗೂ ನಿರಂತರವಾಗಿ ಎರ್ಲಪಾಡಿಗೆ ಭೇಟಿ ನೀಡುತ್ತಿರುವುದು ವಿಶೇಷ. ಇಂದಿನ ಭೇಟಿ ವೇಳೆ ಮೂಲ ನಾಗದೇವರಿಗೆ ಪಂಚಾಮೃತ ಅಭಿಷೇಕ, ಎಳನೀರಿನ ಅಭಿಷೇಕ, ಕಲ್ಪೋಕ್ತ ಪೂಜೆ, ನಾಗತಂಬಿಲ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎರ್ಲಪಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಸೇರಿದಂತೆ ಇತರರು ಹಾಜರಿದ್ದರು.