ಪುತ್ತೂರು: ಅನ್ಯಧರ್ಮದ ಯುವಕನೊಂದಿಗೆ ಹೊಟೇಲ್‌ನಲ್ಲಿ ಜ್ಯೂಸ್ ಕುಡಿಯುತ್ತಿದ್ದ ಕಾಲೇಜು ವಿದ್ಯಾರ್ಥಿನಿಯನ್ನು ಹಾಗೂ ಯುವಕನನ್ನು ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆಯೊಂದು ವರದಿಯಾಗಿದೆ.ವಿದ್ಯಾರ್ಥಿನಿ ಮೂಲತಃ ಶಿವಮೊಗ್ಗದವಳಾಗಿದ್ದು, ಪುತ್ತೂರಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಆರಂಭದಲ್ಲಿ ಕಾಲೇಜ್ ಹಾಸ್ಟೆಲ್‌ನಲ್ಲಿದ್ದು ಕಾಲೇಜಿಗೆ ಹೋಗುತ್ತಿದ್ದ ಆಕೆ ಪ್ರಸ್ತುತ ನೆಹರೂ ನಗರದ ಪಿಜಿಯಲ್ಲಿದ್ದು ಕಾಲೇಜಿಗೆ ಹೋಗುತ್ತಿದ್ದಾಳೆ ಎನ್ನಲಾಗಿದ್ದು,
ಬೆಳಿಗ್ಗೆ ಪುತ್ತೂರು ಬಸ್ ನಿಲ್ದಾಣದ ಬಳಿಯ ಜ್ಯೂಸ್ ಪಾರ್ಲರ್ ನಲ್ಲಿ ಅನ್ಯ ಧರ್ಮದ ಯುವಕನೊಂದಿಗೆ ಜ್ಯೂಸ್ ಕುಡಿಯುವುದನ್ನು ಗಮನಿಸಿದ ಸ್ಥಳೀಯರು ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದು ಅವರು ಪೊಲೀಸರ ಮೂಲಕ ಪುತ್ತೂರು ಮಹಿಳಾ ಠಾಣೆಗೆ ಒಪ್ಪಿಸಿದರು. ವಿಚಾರಣೆಯ ವೇಳೆ ಯುವಕ ಹಾಗೂ ವಿದ್ಯಾರ್ಥಿನಿ ಒಂದೇ ಊರಿನವರಾಗಿದ್ದು ಪರಸ್ಪರ ಪರಿಚಿತರು ಎಂದು ತಿಳಿದುಬಂದಿದೆ.
ಪುತ್ತೂರು ಬಿಜೆಪಿ ನಿಯೋಗವು ಠಾಣೆಗೆ ತೆರಳಿ ಯುವಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಡ ಹಾಕಿತ್ತು. ಯುವತಿಯ ಮನೆಯವರ ಅಭಿಪ್ರಾಯವನ್ನು ತಿಳಿಸಿದ ಬಳಿಕ ನಿಯೋಗ ಅಲ್ಲಿಂದ ಹಿಂದಿರುಗಿತ್ತು. ಠಾಣೆಯಲ್ಲಿ ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.