ಮಂಗಳೂರು: ಕಾವೂರು ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ಅಷ್ಟಬಂಧ ಕ್ರಿಯೆ ಗುರುವಾರ ವೇದಮೂರ್ತಿ ಕೃಷ್ಣರಾಜ ತಂತ್ರಿ ಕುಡುಪು ಇವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವೃಷಭ ಲಗ್ನದ ಸುಮುಹೂರ್ತದಲ್ಲಿ ಜರುಗಿತು.
ಬೆಳಗ್ಗೆ 108 ನಾರಿಕೇಳ ಗಣಪತಿ ಹೋಮ, ಪ್ರತಿಷ್ಠೆ ಹೋಮ, ನಡೆದು ಕುಂಭೇಶ ನಿದ್ರಾ ಕುಂಭಾಭಿಷೇಕ ಜೀವಕಲಶಾಭಿಷೇಕ, ಪ್ರಾಣನ್ಯಾಸ ಪ್ರತಿಷ್ಠಾ ಬಲಿ ಮಹಾಪೂಜೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ನಿತ್ಯ ನೈಮಿತ್ತಿಕ ನಿಶ್ಚಯ, ಭದ್ರದೀಪ ಸ್ಥಾಪನೆ, ಗರ್ಭಗೃಹ ಕವಾಟ ಬಂಧನ, ಸೋಪಾನ ಪೂಜೆ, ಗಣಪತಿ ಶಾಸ್ತಾ ದೇವರುಗಳಿಗೆ ಕಲಶಪೂರಣ ಅಧಿವಾಸ ಹೋಮಗಳು, ರಕ್ತೇಶ್ವರಿ ಪೀಠಾಧಿವಾಸ ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ದೇವರ ದರ್ಶನ ಪಡೆದು ಅನ್ನಸಂತರ್ಪಣೆ ಸ್ವೀಕರಿಸಿದರು.