ಮಂಗಳೂರು: ಡಾ. ಮಾಲತಿ ಶೆಟ್ಟಿ ಮಾಣೂರು ಸಾರಥ್ಯದ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆದ 42ನೇ ಸರಣಿ ಕೃತಿ, ಕೊಡಗಿನ ಚಿತ್ರ ಶಿಲ್ಪ ಕಲಾವಿದ ಮತ್ತು ಲೇಖಕ ದುಬಾಯಿಯ ಬಗ್ಗೆ ಪ್ರಕಟಿತ ಲೇಖನಗಳ ಸಂಕಲನ "ಕಡಲಾಚೆಯ ರಮ್ಯ ನೋಟ ದುಬಾಯಿ" ಯನ್ನು ಮಂಗಳೂರಿನ ಪತ್ರಿಕಾ ಭವನದಲ್ಲಿ ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಲೋಕಾರ್ಪಣೆ ಮಾಡಿದ ನಂತರ ಮಾತನಾಡಿ, "ದುಬಾಯಿಯಲ್ಲಿ ಕನ್ನಡ ಪುಸ್ತಕವನ್ನು ತನ್ನದೇ ಆದ ಶೈಲಿಯಲ್ಲಿ ರಚಿಸಿ ದುಬಾಯಿಯಲ್ಲಿರುವ ವಾಸ್ತು ಶಿಲ್ಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಅತ್ಯಂತ ಸುಂದರವಾದ ವರ್ಣ ಚಿತ್ರದೊಂದಿಗೆ ಓದುಗರಿಗೆ ಮುಟ್ಟಿಸುವಲ್ಲಿ ಕೃತಿ ಯಶಸ್ವಿಯಾಗಿದೆ" ಎಂದರು.
ತಮ್ಮ ಲೇಖನಗಳನ್ನು ಬರೆದು ಪ್ರಕಟಿಸಲು ಅವಕಾಶಗಳನ್ನು ಕಲ್ಪಿಸಿರುವ ಎಲ್ಲಾ ಮಾಧ್ಯಮಗಳಿಗೆ ತನ್ನ ಕೃತಜ್ಜತೆಗಳನ್ನು ಸಲ್ಲಿಸಿ, ತನ್ನ ಪ್ರತಿಭೆಗೆ ಸದಾ ಪ್ರೋತ್ಸಾಹ ಬೆಂಬಲ ನೀಡಿರುವ ಸ್ನೇಹಿತರು, ಸಂಘ ಸಂಸ್ಥೆಗಳಿಗೆ ಧನ್ಯವಾದಗಳನ್ನು ಸಲ್ಲಿಸಿ, ಕೃತಿಯ ಮೊದಲ ಪ್ರತಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದಿವ್ಯ ಸನ್ನಿಧಿಗೆ ಅರ್ಪಣೆ ಮಾಡಿ ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಶುಭಾಶೀರ್ವಾದ ಪಡೆದು ಹಾಗೂ ಮೂಡಬಿದ್ರೆ ಆಳ್ವಾಸ್ ವಿದ್ಯಾಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವರವರಿಂದ ಶುಭ ಸಂದೇಶವನ್ನು ಪಡೆದು ಗಣ್ಯಾತಿ ಗಣ್ಯರ ಸಮ್ಮುಖದಲ್ಲಿ ಲೋಕಾರ್ಪಣೆ ಯಾಗಿರುವುದಕ್ಕೆ ತಮ್ಮ ಕನಸು ನನಸಾಗಿದೆ ಎಂದು ಬಿ ಕೆ ಗಣೇಶ್ ರೈ ಹೇಳಿದರು.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀ ಶ್ರೀನಿವಾಸ್ ನಾಯಕ್ ಮಾತನಾಡಿ, ಇಂದಾಜೆ ವಿದೇಶದ ನೆಲದಲ್ಲಿ ಕನ್ನಡದ ಕಂಪನ್ನು ಪಸರಿಸುತ್ತಿರುವ ಗಣೇಶ್ ರೈಯವರ ಸಾಧನೆಗಳನ್ನು ಶ್ಲಾಘಿಸಿದರು.
ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಸರ್ವೋತ್ತಮ ಶೆಟ್ಟಿ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಗಣೇಶ್ ರೈಯವರು ಶಾರ್ಜಾ ಕರ್ನಾಟಕ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳಲ್ಲಿ ಕರ್ನಾಟಕದ ಕಲೆ ಭಾಷೆ ಸಂಸ್ಕೃತಿಯನ್ನು ಕಳೆದ ಎರಡುವರೆ ದಶಕಗಳಿಂದ ನಿರಂತರವಾಗಿ ಮಾಡಿಕೋಡು ಬರುತ್ತಿದ್ದು, ಶಿಲ್ಪಿಯಾಗಿ, ಚಿತ್ರಕಾರರಾಗಿ, ಕಾರ್ಯಕ್ರಮ ನಿರೂಪಕರಾಗಿ ಸಮಾಜ ಸೇವಕರಾಗಿ, ಬಹುಮುಖ ಪ್ರತಿಭೆಯ ವ್ಯಕ್ತಿತ್ವವನ್ನು ಹೊಂದಿರುವ ಗಣೇಶ್ ರೈಯವರು ಲೇಖಕ ಬರಹಗಾರರಗಿ ನೂರಾರು ಗಣ್ಯರ ಸಂದರ್ಶನ ಲೇಖನಗಳನ್ನು ಪ್ರಕಟಿಸುತ್ತಾ ಇದೀಗ ದುಬಾಯಿಯ ಸಂಪೂರ್ಣ ಚಿತ್ರಣವಿರುವ ಕಡಲಾಚೆಯ ರಮ್ಯ ನೋಟ ದುಬಾಯಿ ಕೃತಿಯನ್ನು ಪ್ರಕಟಿಸಿರುವುದು ದುಬಾಯಿಯಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರಿಗೆ ಸಂದಿರುವ ಗೌರವ ಎಂದು ಗಣೇಶ್ ರೈಯವರ ಸಾಧನೆಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.