ಮಂಗಳೂರು: ಕೇರಳ ರಾಜ್ಯದಿಂದ ಸೀವಿಯೇಜ್ ಲಿಕ್ವಿಡ್ ವೇಸ್ಟ್ ಮಾತ್ರವಲ್ಲ, ಬಯೋ ಮೆಡಿಕಲ್ ತ್ಯಾಜ್ಯವನ್ನೂ ತಂದು ಕರ್ನಾಟಕದ ಹಳ್ಳ-ಕೊಳ್ಳ, ನದಿ, ಒಳಚರಂಡಿಗೆ ಬಿಡಲಾಗುತ್ತಿದೆ ಎಂಬ ಆತಂಕಕಾರಿ ವಿಚಾರವನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಖಾತರಿಪಡಿಸಿದ್ದಾರೆ.
ಕೇರಳ ರಾಜ್ಯದಿಂದ ಕರ್ನಾಟಕದ ಚರಂಡಿ, ರಾಜಕಾಲುವೆ, ನದಿಗಳಿಗೆ ಬಿಡುತ್ತಿದ್ದ ಎರಡು ಟ್ಯಾಂಕರ್‌ಗಳನ್ನು ಮಂಗಳೂರು ಮನಪಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿದ್ದವರ ಮೇಲೆ ಪಾಲಿಕೆ ಅಧಿಕಾರಿಗಳು ಕೇಸ್ ಹಾಕಿದ್ದಾರೆ.
ಕೃತ್ಯದಿಂದ ಕರಾವಳಿ ಹಾಗೂ ಬಾರ್ಡರ್‌ಗಳಲ್ಲಿ ಜಲಚರ ಹಾಗೂ ಜೀವರಾಶಿಗಳಿಗೆ ಅತ್ಯಂತ ಕೆಟ್ಟ ಪರಿಣಾಮ ಬೀರುತ್ತಿದೆ. ಅದನ್ನು ಮೊದಲು ತಡೆಗಟ್ಟಬೇಕು. ಈ ಕೃತ್ಯವನ್ನು ಕಾನೂನಾತ್ಮಕವಾಗಿ ತಡೆಗಟ್ಟಲು ಜಂಟಿ ಸಭೆ ನಡೆಸಿದ್ದೇನೆ. ಪಾಲಿಕೆ ವಾಹನಗಳೇ ಕೃತ್ಯದಲ್ಲಿ ಭಾಗಿಯಾಗಿರೋದು ಸಾಕ್ಷಿ ಸಮೇತ ಸಿಕ್ಕಿದೆ. ಕೊನೆಪಕ್ಷ ತ್ಯಾಜ್ಯವನ್ನು ಟ್ರೀಟ್ ಮೆಂಟ್ ಪ್ಲಾಂಟ್‌ಗೆ ಹಾಕಿದ್ರು ಪರವಾಗಿಲ್ಲ. ಸಿಕ್ಕ ಸಿಕ್ಕ ಹಳ್ಳಕ್ಕೆ ಬೀಸಾಕಿ ಹೋಗುತ್ತಿದ್ದಾರೆ. ಇದು ಸಾಂಕ್ರಾಮಿಕ ರೋಗಗಳನ್ನು ಹರಡುವ ಆತಂಕವಿದೆ ಎಂದು ನರೇಂದ್ರ ಸ್ವಾಮಿ ಹೇಳಿದರು.