image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಾನವೀಯ ಮೌಲ್ಯಗಳುಳ್ಳ ಸರ್ವಜ್ಞನ ತ್ರಿಪದಿಗಳನ್ನು ವಿದ್ಯಾರ್ಥಿಗಳು ಓದಬೇಕು- ಶಾಸಕ ಡಾ. ಭರತ್ ಶೆಟ್ಟಿ

ಮಾನವೀಯ ಮೌಲ್ಯಗಳುಳ್ಳ ಸರ್ವಜ್ಞನ ತ್ರಿಪದಿಗಳನ್ನು ವಿದ್ಯಾರ್ಥಿಗಳು ಓದಬೇಕು- ಶಾಸಕ ಡಾ. ಭರತ್ ಶೆಟ್ಟಿ

ಮಂಗಳೂರು:ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘ, ಕರಾವಳಿ ವಿಭಾಗ ಮತ್ತು ಕರಾವಳಿ ಕುಲಾಲರ / ಕುಂಬಾರರ ಯುವ ವೇದಿಕೆ ಇವರ ಸಹಕಾರದೊಂದಿಗೆ ಸಂತ ಕವಿ ಸರ್ವಜ್ಞ ಜಯಂತಿ ಬೋಂದೆಲ್ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಮಾತನಾಡಿ, 16ನೇ ಶತಮಾನದಲ್ಲಿ ಕುಲಾಲ ಸಮುದಾಯದಲ್ಲಿ ಹುಟ್ಟಿದ ಸಂತ ಕವಿ ಸರ್ವಜ್ಞ ಜೀವನವನ್ನು ಯಾವ ದೃಷ್ಟಿಕೋನದಿಂದ ನೋಡುತ್ತಿದ್ದರು ಎಂಬುದನ್ನು ನಾವು ಅವರ ತ್ರಿಪದಿಗಳನ್ನು ಓದಿದಾಗ ತಿಳಿಯುತ್ತದೆ. ಮೂರು ಪುಟಗಳವರೆಗೆ ಬರೆಯುವ ವಿಚಾರವನ್ನು ಕೇವಲ ಮೂರೇ ಸಾಲುಗಳಲ್ಲಿ ತಿಳಿಸುವ ಸರ್ವಜ್ಞನ ತ್ರಿಪದಿಗಳನ್ನು ವಿದ್ಯಾರ್ಥಿಗಳು ಓದಿ ಅರಿತುಕೊಳ್ಳಬೇಕು. ಸರ್ವಜ್ಞ ತಮ್ಮ ತ್ರಿಪದಿಯಲ್ಲಿ ಜಗತ್ತಿನ ಜ್ಞಾನ, ವೈಚಾರಿಕತೆ, ಮಾನವೀಯ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ಇಂತಹ ಮಾನವೀಯ ಮೌಲ್ಯಗಳುಳ್ಳ ತ್ರಿಪದಿಗಳನ್ನು ವಿದ್ಯಾರ್ಥಿಗಳು ಓದಬೇಕು. ಇಡೀ ವಿಶ್ವದಲ್ಲಿ ಹಳೆಯ ನಾಗರಿಕತೆ ಭಾರತೀಯ ಸಂಸ್ಕೃತಿ. ಇದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು.  ಸರ್ವಜ್ಞನಂತಹ ಹಿರಿಯರು ಸಾಧನೆ ಮಾಡಿದ್ದಾರೆ. ಇದನ್ನು ತಿಳಿದುಕೊಂಡರೆ ಮನೋಸ್ಥೆರ್ಯ ಬರಲು ಸಾಧ್ಯವಾಗುತ್ತದೆ ಎಂದರು. ತನ್ನ ಇತಿಹಾಸವನ್ನು ಬಲ್ಲವನು ತನ್ನ ಇತಿಹಾಸವನ್ನು ಸೃಷ್ಟಿಸಬಹುದು ಎಂಬ ಮಾತನ್ನು ವಿದ್ಯಾರ್ಥಿಗಳಿಗೆ ಹೇಳಿದರು. ಮೇಯ‌ರ್ ಮನೋಜ್ ಕುಮಾರ್ ಮಾತನಾಡಿ, ಸರ್ವ ಜ್ಞಾನವನ್ನು ಹೊಂದಿದ ತ್ರಿಪದಿ ಕವಿ ಸರ್ವಜ್ಞ ಜನರ ಜೀವನಕ್ಕೆ, ಸಮಾಜಕ್ಕೆ ಉತ್ತಮ ಸಂದೇಶವನ್ನು ತಮ್ಮ ವಚನಗಳ ಮೂಲಕ ನೀಡಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಕರಾವಳಿ ಕುಂಬಾರರ ಯುವ ವೇದಿಕೆ ಬೇಡಿಕೆಯನ್ನು ಪೂರೈಸುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಿದರು. 

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ ಎಸ್ ಗಟ್ಟಿ ಮಾತನಾಡಿ, ನಮ್ಮ ದೇಶದ ಹಿರಿಯರು ಸಮಾಜಕ್ಕೆ ಶಕ್ತಿಯನ್ನು ತುಂಬಿದವರು. ಇಂತಹ ಜಯಂತಿಗಳನ್ನು ಆಚರಿಸುವುದರಿಂದ ಇಂದಿನ ಯುವ ಜನತೆಗೆ ಅಂದಿನ ಹಿರಿಯರ ಜೀವನ ಚರಿತ್ರೆ ತಿಳಿಯುತ್ತದೆ. ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಸರಕಾರ ಯುವ ಜನತೆಗೆ ತುಂಬಾ ಅವಕಾಶಗಳನ್ನು ನೀಡುತ್ತಿದೆ.ಇಂತಹ ಅದ್ಭುತ ಅವಕಾಶಗಳನ್ನು ವಿದ್ಯಾರ್ಥಿಗಳು ಉಪಯೋಗಿಸಿಕೊಂಡು ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂಬ ಕಿವಿಮಾತನ್ನು  ಹೇಳಿದರು. ಉಪನ್ಯಾಸ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಪ್ರಾಧ್ಯಾಪಕ ಡಾ. ಯತೀಶ್ ಕುಮಾರ್ ಮಾತನಾಡಿ, 16ನೇ ಶತಮಾನದ ಸರ್ವಜ್ಞರ ನಿಜನಾಮ ಪುಷ್ಪದತ್ತ. ಜೀವನ ಅನುಭವಕ್ಕಿಂತ ಮಿಗಿಲಾದ ಜ್ಞಾನ ಬೇರೊಂದಿಲ್ಲ ಎಂಬುದನ್ನು ವಚನದ ಮೂಲಕ ಸರ್ವಜ್ಞ ತಿಳಿಸಿದ್ದಾರೆ. ಅವರ ಅಗಾಧ ಜ್ಞಾನದಿಂದ ಸರ್ವಜ್ಞ ಎಂಬ ಹೆಸರನ್ನು ಪಡೆದಿದ್ದಾರೆ. ಸಂಸ್ಕಂತದಲ್ಲಿ ಸರ್ವಜ್ಞ ಎಂದರೆ ಸರ್ವಜ್ಞಾನವನ್ನು ಹೊಂದಿದವರು ಎಂಬ ಅರ್ಥವಿದೆ.

ಸರ್ವಜ್ಞನನ್ನು ತ್ರಿಪದಿ ಬ್ರಹ್ಮ ಎಂದು ಗುರುತಿಸಲಾಗಿದೆ. ನೇರ ಕಟು ಸತ್ಯವನ್ನು ತಮ್ಮ ತ್ರಿಪದಿಯ ಮೂಲಕ ತಿಳಿಸಿದ್ದಾರೆ. ಜೀವನ ಮೌಲ್ಯವನ್ನು ರೂಪಿಸಿದ ಹಿನ್ನೆಲೆಯಲ್ಲಿ ಸರ್ವಜ್ಞ ಸರ್ವಕಾಲಿಕನೂ ಆಗಿ ಮನ್ನಣೆ ಪಡೆದಿದ್ದಾರೆ. ಸರ್ವಜ್ಞ ಮಹಾಕವಿಯ ವಿಚಾರಧಾರೆ ವೈಯಕ್ತಿಕ ಬದುಕಿಗೆ ಹೆಚ್ಚಿನ ಬೆಳಕು ನೀಡಲಿ. ಸರ್ವಜ್ಞ ನೀಡಿದ ಸಂದೇಶ ಪ್ರತಿಯೊಂದು ಕಡೆಗೂ ತಲುಪಬೇಕು ಎಂದರು.

ಕಾರ್ಯಕ್ರಮದಲ್ಲಿ ಬೋಂದೆಲ್ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಪ್ರಾಂಶುಪಾಲ ಗುಣವಂತ ವಿ ಗುನಗಿ, ಕರ್ನಾಟಕ ರಾಜ್ಯ ಕುಂಬಾರರ ಮಹಾ ಸಂಘದ ಕಾರ್ಯಾಧ್ಯಕ್ಷ ಎಂ ಅಣ್ಣಯ್ಯ ಕುಲಾಲ್ , ಕರಾವಳಿ ಕುಲಾಲ ಕುಂಬಾರ ಯುವ ವೇದಿಕೆ ಅಧ್ಯಕ್ಷ ಗಂಗಾಧರ ಬಂಜನ್‌, ಸುಕುಮಾರ್ ಬಂಟ್ವಾಳ್, ಗಣೇಶ್‌ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ ಸ್ವಾಗತಿಸಿ, ಹೆಚ್. ಕೆ ನಯನಾಡು ನಿರೂಪಿಸಿದರು.

Category
ಕರಾವಳಿ ತರಂಗಿಣಿ