ಮಂಗಳೂರು: ಜ.31ರಿಂದ ಫೆ. 2ರವರೆಗೆ ಮಂಗಳೂರಿನ ಸುಂದರವಾದ ತಣ್ಣೀರುಬಾವಿ ಕಡಲತೀರ 3ನೇ ಆವೃತ್ತಿಯ ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಮಂಗಳೂರು ಟ್ರಯಥ್ಲಾನ್ ಅನ್ನು ಆಯೋಜಿಸಲು ಸಿದ್ಧವಾಗಿವೆ, ಇದು ಒಂದು ರೀತಿಯ ಕ್ರೀಡಾ ಮಹೋತ್ಸವವಾಗಿದ್ದು ಇದು ಭಾರತಕ್ಕೆ ಕೀರ್ತಿ ತರಬಲ್ಲ ಉನ್ನತ-ಕಾರ್ಯಕ್ಷಮತೆಯ ಕ್ರೀಡಾಪಟುಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಈ ಮೂರು ದಿನಗಳಲ್ಲಿ ದಿನಗಳಲ್ಲಿ ಸ್ಪರ್ಧಾತ್ಮಕ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಪಸ್ಯಾ ಫೌಂಡೇಶನ್ ನ ಸಂಸ್ಥಾಪಕಿ ಸಬಿತಾ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. “ಕ್ಯಾನ್ಸರ್ ರೋಗಿಗಳನ್ನು ಆರೈಕೆ ಮಾಡಲು ತಪಸ್ಯ ಫೌಂಡೇಶನ್ ಆರೈಕೆ ಕೇಂದ್ರಗಳನ್ನು ನಡೆಸುತ್ತಿದೆ. ಸಂಘಟನೆಗೆ ಆರ್ಥಿಕ ಶಕ್ತಿಯನ್ನು ತುಂಬುವ ಉದ್ದೇಶದಿಂದ ಮಂಗಳೂರು ಬೀಚ್ ಫೆಸ್ಟಿವಲ್ ಆಯೋಜಿಸುತ್ತಿದೆ. ಜ.31ರ ಸಂಜೆ 5:30 ಗಂಟೆಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಶ್ರೀ ಕ್ಷೇತ್ರ ಒಡಿಯೂರಿನ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್, ಸಚಿವರಾದ ಹೆಚ್.ಕೆ.ಪಾಟೀಲ್, ಎನ್.ಚೆಲುವರಾಯಸ್ವಾಮಿ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ. ಮತ್ತಿತರರು ಪಾಲ್ಗೊಳ್ಳಲಿದ್ದಾರೆ“ ಎಂದರು. ”31 ಮತ್ತು 1ರಂದು ರಾಷ್ಟ್ರಮಟ್ಟದ ಬೀಚ್ ವಾಲಿಬಾಲ್ ಸ್ಪರ್ಧೆ ನಡೆಯಲಿದ್ದು ಬೇರೆ ಬೇರೆ ರಾಜ್ಯದ ಟೀಮ್ ಗಳು ಭಾಗವಹಿಸಲಿವೆ. ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿದೆ. ಸಂಜೆ 7:15ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 8 ಗಂಟೆಗೆ ಮಲ್ಲಕಂಭ ಕಾರ್ಯಕ್ರಮ ನಡೆಯಲಿದೆ. ಇಷ್ಟೇ ಅಲ್ಲದೆ ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ ಹಾಗೂ ವಿಜ್ಞಾನ ವಸ್ತುಪ್ರದರ್ಶನ ಕೂಡ ಏರ್ಪಡಿಸಲಾಗಿದೆ“
ಫೆ.1ರಂದು ರಾತ್ರಿ 7ರಿಂದ 8 ಗಂಟೆಯವರೆಗೆ ಕಳರಿಪಯಟ್ಟು, 8ರಿಂದ 10ರವರೆಗೆ ಸ್ವರಧಿ ಸಂಗೀತ ಕಾರ್ಯಕ್ರಮ ಇರಲಿದೆ. ಫೆ.2ರಂದು ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು 7 ಗಂಟೆಗೆ ಫ್ಯಾಷನ್ ಶೋ, 8 ಗಂಟೆಗೆ ನಿಹಾಲ್ ತಾವ್ರೋ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
ತಪಸ್ಯ ಫೌಂಡೇಶನ್ ನವೀನ್ ಶೆಟ್ಟಿ ಮಾತಾಡಿ, “ಫೆ.1ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕ್ಯಾನ್ಸರ್ ಸ್ಕ್ರೀನಿಂಗ್ ಕ್ಯಾಂಪ್ ಯೇನೆಪೋಯ ಆಸ್ಪತ್ರೆ ಸಹಾಭಾಗಿತ್ವದಲ್ಲಿ ನಡೆಯಲಿದೆ. ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆಯಿದ್ದು ಮಂಗಳೂರಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ. ಕ್ಯಾನ್ಸರ್ ರೋಗಿಗಳ ಆರೈಕೆಯಲ್ಲಿ ನಮ್ಮ ಸಂಘಟನೆ ತೊಡಗಿಕೊಂಡಿದ್ದು ಜನರ ಸಹಕಾರದಿಂದ ಕ್ಯಾನ್ಸರ್ ಮಹಾಮಾರಿಯನ್ನು ಹಿಮ್ಮೆಟ್ಟಿಸಲು ಇನ್ನಷ್ಟು ಶಕ್ತಿಶಾಲಿಯಾಗಿ ಕೆಲಸ ಮಾಡಲು ಸಾಧ್ಯವಿದೆ” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಮೋಹನ್ ಶೆಟ್ಟಿ, ವಿಶ್ವಾಸ್, ವಿಶಾಲ್ ರಾವ್, ಮತ್ತಿತರರು ಉಪಸ್ಥಿತರಿದ್ದರು.