ಉಪ್ಪಿನಂಗಡಿ: ಚಾಲಕ ನಿಲ್ಲಿಸಿ ಹೋಗಿದ್ದ ಗ್ಯಾಸ್ ಟ್ಯಾಂಕರೊಂದು ಏಕಾಏಕಿ ಮುಂದಕ್ಕೆ ಚಲಿಸಿ ರಸ್ತೆ ಬದಿಗೆ ಮಗುಚಿ ಬಿದ್ದ ಘಟನೆ ಇಂದು ನೆಕ್ಕಿಲಾಡಿಯ ಬೊಳ್ಳಾರು ಎಂಬಲ್ಲಿನ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಈ ಸಂದರ್ಭ ಟ್ಯಾಂಕರ್ ನಿಂದ ಯಾವುದೇ ಗ್ಯಾಸ್ ಸೋರಿಕೆಯಾಗದ್ದರಿಂದ ಸಂಭಾವ್ಯ ಅಪಾಯ ತಪ್ಪಿದೆ. ಗ್ಯಾಸ್ ತುಂಬಿದ್ದ ಬುಲೆಟ್ ಟ್ಯಾಂಕರ್ ಮಂಗಳೂರಿನಿಂದ ತಮಿಳುನಾಡಿಗೆ ತೆರಳುತ್ತಿತ್ತು. ಈ ನಡುವೆ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅದರ ಚಾಲಕ ಕನಕರಾಜು ಎಂಬವರು ಟ್ಯಾಂಕರನ್ನು ಬೊಳ್ಳಾರು ಎಂಬಲ್ಲಿನ ಇಳಿಜಾರು ಪ್ರದೇಶದಲ್ಲಿ ರಸ್ತೆ ಬದಿ ನಿಲ್ಲಿಸಿ ಮೆಕ್ಯಾನಿಕ್ ಅನ್ನು ಕರೆದುಕೊಂಡು ಬರಲು ತೆರಳಿದ್ದರು. ಅವರು ಹೋದ ಕೆಲವೇ ಕ್ಷಣಗಳಲ್ಲಿ ಟ್ಯಾಂಕರ್ ಏಕಾಏಕಿ ಮುಂದಕ್ಕೆ ಚಲಿಸಿದ್ದು, ಹೆದ್ದಾರಿ ಬದಿ ಮಗುಚಿ ಬಿದ್ದಿದೆ.
ಸ್ಥಳಕ್ಕೆ ಪುತ್ತೂರು ಅಗ್ನಿಶಾಮಕ ದಳದವರು ಹಾಗೂ ಉಪ್ಪಿನಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.