image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶಿಷ್ಟರಿಗೆ ವಿಶಿಷ್ಟ ಮೇಳ: ಖುಷಿಯಿಂದ ಕುಣಿದಾಡಿದ ಭಿನ್ನ ಸಾಮರ್ಥ್ಯದ ಮಕ್ಕಳು...!

ವಿಶಿಷ್ಟರಿಗೆ ವಿಶಿಷ್ಟ ಮೇಳ: ಖುಷಿಯಿಂದ ಕುಣಿದಾಡಿದ ಭಿನ್ನ ಸಾಮರ್ಥ್ಯದ ಮಕ್ಕಳು...!

ಮಂಗಳೂರು: ಸೇವಾ ಭಾರತಿಯ ಅಂಗಸಂಸ್ಥೆಯಾದ ಆಶಾ ಜ್ಯೋತಿಯು ಕೆನರಾ ಶಿಕ್ಷಣ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳಿಗೆ ನಗರದ ಡೊಂಗರಕೇರಿಯ ಕೆನರಾ ಪ್ರೌಢಶಾಲಾ ಆವರಣದಲ್ಲಿ ಆಯೋಜಿಸಿದ್ದ ವಿಶಿಷ್ಟ ಮೇಳದಲ್ಲಿ ಭಿನ್ನ ಸಾಮರ್ಥ್ಯದ ಮಕ್ಕಳು ಖುಷಿಯಾಗಿ ನಲಿದು ಸಂಭ್ರಮಿಸಿದರು. ಭಿನ್ನ ಸಾಮರ್ಥ್ಯದ ಮಕ್ಕಳು ಮತ್ತವರ ಪೋಷಕರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು.

ತಿರುಗುವ ಮರದ ಕುದುರೆ, ತೊಟ್ಟಿಲು, ಜಂಪಿಂಗ್ ಬಾಲ್, ಒಂಟೆ ಸವಾರಿ, ತಿಲಕ ಧಾರಣೆ, ಮೆಹಂದಿ ಹಾಕುವುದು, ರಿಂಗ್ ಬಿಸಾಡುವುದು, ಕುದುರೆ ಚಿತ್ರಕ್ಕೆ ಬಾಲ ಬಿಡಿಸುವುದು ಇತ್ಯಾದಿ ಆಟದ ಮೂಲಕ ಜಾತ್ರೆಯ ವಾತಾವರಣ ಮಕ್ಕಳನ್ನು ಸಂಭ್ರಮಿಸುವಂತೆ ಮಾಡಿತ್ತು. ಚರುಮುರಿ, ಪಾನಿಪೂರಿ, ಐಸ್‌ಕ್ರೀಂ, ಐಸ್‌ಕ್ಯಾಂಡಿ, ಕಲ್ಲಂಗಡಿ ಹಣ್ಣು ಮಸಾಲೆ ಪುರಿ, ಸಕ್ಕರೆ ಮಿಠಾಯಿ, ಚಕ್ಕುಲಿ ಉಂಡೆ, ಸ್ಯಾಂಡ್‌ವಿಚ್, ಪೋಡಿ, ಗೋಲಿ ಸೋಡ, ಬೇಲ್‌ಪುರಿ, ಕಬ್ಬಿನ ಜ್ಯೂಸ್ ಇತ್ಯಾದಿ ಆಹಾರ-ಪಾನೀಯವು ಭಾಗವಹಿಸಿದ ಎಲ್ಲರಿಗೂ ಉಚಿತವಾಗಿ ನೀಡಿ ಕೆನರಾ ಶಾಲೆಯ ಆವರಣವನ್ನು ಜಾತ್ರೆಯಂತೆ ಸಜ್ಜುಗೊಳಿಸಿದ್ದು ವಿಶೇಷವಾಗಿತ್ತು.  ಬಿಸಿಲನ್ನೂ ಲೆಕ್ಕಿಸದೆ ಮಕ್ಕಳು ಪೋಷಕರ ಸಹಿತ ಸಾವಿರಾರು ಮಂದಿ ಮೇಳದಲ್ಲಿ ಪಾಲ್ಗೊಂಡಿದ್ದರು.

ಮೇಯ‌ರ್ ಮನೋಜ್ ಕುಮಾರ್ ಕೋಡಿಕಲ್‌ ವಿಶಿಷ್ಟ ಮೇಳವನ್ನು ಉದ್ಘಾಟಿಸಿದರೆ, ಆಶಾಜ್ಯೋತಿಯ ಗೌರವಾಧ್ಯಕ್ಷ ಡಾ.ವಿ. ಮುರಳೀಧರ ನಾಯಕ್, ಲಂಚುಲಾಲ್, ಅಧ್ಯಕ್ಷೆ ಗೀತಾ ಲಕ್ಷ್ಮೀಶ್, ಕಲ್ಲಡ್ಕ ಪ್ರಭಾಕರ ಭಟ್ ಉಪಸ್ಥಿತರಿದ್ದರು.

ದ.ಕ. ಮತ್ತು ಆಸುಪಾಸಿನ ಜಿಲ್ಲೆಗಳ 1,500ಕ್ಕೂ ಅಧಿಕ ವಿಶೇಷ ಸಾಮರ್ಥ್ಯದ ಮಕ್ಕಳು, 2,000ಕ್ಕೂ ಮಕ್ಕಳ ಪೋಷ ಕರು ಭಾಗವಹಿಸಿದರು. ಆಳ್ವಾಸ್ ಮೂಡುಬಿದಿರೆ, ಅಡ್ಯಾ‌ರ್ ಸಹ್ಯಾದ್ರಿ ಕಾಲೇಜು, ಕಾವೂರು ಸರಕಾರಿ ಕಾಲೇಜು, ಮಂಗಳೂರು ರಥಬೀದಿ ಸರಕಾರಿ ಕಾಲೇಜುಗಳ ವಿದ್ಯಾರ್ಥಿಗಳು, ಎನ್‌ಸಿಸಿ, ಸ್ಕೊಟ್ ವಿದ್ಯಾರ್ಥಿಗಳು ಸ್ವಯಂ ಸೇವಕ ರಾಗಿ ಸಹಕರಿಸಿದ್ದಾರೆ.

Category
ಕರಾವಳಿ ತರಂಗಿಣಿ