image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೂಲತ್ವ ವಿಶ್ವ ಪ್ರಶಸ್ತಿ ಪ್ರಧಾನ 2024

ಮೂಲತ್ವ ವಿಶ್ವ ಪ್ರಶಸ್ತಿ ಪ್ರಧಾನ 2024

ಮಂಗಳೂರು: ಮೂಲತ್ವ "ನಾನೇ ನೀನು ನೀನೇ ನಾನು" ಎಂಬ ತತ್ವದಡಿಯಲ್ಲಿ ಕಾರ್ಯಾಚರಿಸುತ್ತಿರುವ ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ದೇವರಲ್ಲಿ ಮಾನವನನ್ನು ಮಾನವರಲ್ಲಿ ದೇವರನ್ನು, ಮಾನವರೊಳಗೆ ಪರಸ್ಪರರನ್ನು ಕಂಡು ಪರಸ್ಪರರನ್ನು ಅರ್ಥೈಸಿ ಪರಸ್ಪರರ ಸಮಸ್ಯೆಗಳಿಗೆ ಪರಿಹಾರ ಕಾಣುವ ಉದಾತ್ತ ವಿಶಾಲ ಮನೋಭಾವನೆಯೊಂದಿಗೆ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿದೆ. ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಕಳೆದ ಕೆಲವು ವರ್ಷಗಳಿಂದ ಸಾಮೂಹಿಕ ಪ್ರಾರ್ಥನೆಯಂತಹ ಆಧ್ಯಾತ್ಮಿಕ ಮತ್ತು ಮಾನಸಿಕ ಆರೋಗ್ಯ ಸಂರಕ್ಷಣೆಯ ಒತ್ತಡದ ಹಿತ ಜೀವನಕ್ಕೆ ಪೂರಕವಾಗುವಂತಹ ಕಾರ್ಯಕ್ರಮಗಳು ಜನಸಾಮಾನ್ಯರಿಗೆ ಉಪಯೋಗವಾಗುವ ವಿವಿಧ ಮಾಹಿತಿ ಶಿಬಿರಗಳು, ಸ್ವಚ್ಛ ಭಾರತ ಅಭಿಯಾನ, ಉಚಿತ ವೈದ್ಯಕೀಯ ಶಿಬಿರಗಳು, ಅರ್ಹ ಬಡ ಮಕ್ಕಳಿಗೆ ಶೈಕ್ಷಣಿಕ ನೆರವುಗಳು, ಬಡ ಕುಟುಂಬದವರಿಗೆ ವೈದ್ಯಕೀಯಕ್ಕೆ ನೆರವು, ಮದುವೆಗಳಿಗೆ ನೆರವು ಇತ್ಯಾದಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಶ್ರೀ ಪ್ರಕಾಶ್ ಮೂಲತ್ವ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,  ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಸುಮಾರು 9 ವರ್ಷದಿಂದ ಈ ಜಗತ್ತಿನಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡಿ ಸ್ಪಂದಿಸುವ, ತನ್ನನ್ನು ತಾನು ಸಮಾಜಕ್ಕೆ ಮುಡಿಪಾಗಿಟ್ಟು ಸಮಾಜದ ನೋವಿನೊಂದಿಗೆ ಸ್ಪಂದಿಸುವ ಮುತ್ತುರತ್ನಗಳಂತೆಯೇ ಹೊಳಪಾಗಿರುವ ಆ ದಿವ್ಯ ಚೈತನ್ಯಗಳನ್ನು ಹುಡುಕಿ ಪ್ರಸಾದ ರೂಪದಲ್ಲಿ ಪ್ರಶಸ್ತಿ ಕಲ್ಪಿಸುವ ನಿಟ್ಟಿನಲ್ಲಿ “ಮೂಲತ್ವ ವಿಶ್ವಪ್ರಶಸ್ತಿ" ಎಂಬ ಹೊಸ ರೂಪು ರೇಷದ ಕಲ್ಪನೆಯನ್ನು ಹಮ್ಮಿಕೊಳ್ಳಲಾಯಿತು. ವರ್ಷದಲ್ಲಿ ಒಬ್ಬರಂತೆ ಜಗತ್ತಿನಾದ್ಯಂತ ಮುತ್ತುರತ್ನಗಳೆಂಬ ದಿವ್ಯ ಚೈತನ್ಯಗಳನ್ನು ಹುಡುಕಿ ಪ್ರಶಸ್ತಿ ನೀಡಲಾಯಿತು. 2015ರಲ್ಲಿ ಮಂಗಳೂರಿನ ಅಕ್ಷರಸಂತ ಹರೇಕಳ ಹಾಜಬ್ಬ, 2016ರಲ್ಲಿ ಪಶ್ಚಿಮ ಬಂಗಾಳದ ಪದ್ಮಶ್ರೀ ಸುಭಾಷಿನಿ ಮಿಸ್ತ್ರೀ, 2017ರಲ್ಲಿ ಮಹಾರಾಷ್ಟ್ರ,ಪುಣೆಯ ಪದ್ಮಶ್ರೀ ಡಾ. ಸಿಂಧುತಾಯಿ ಸಪ್ಯಾಲ್, 2018ರಲ್ಲಿ ಬೆಂಗಳೂರಿನ ಆಟೋರಾಜ, 2019ರಲ್ಲಿ ಮಹಾರಾಷ್ಟ್ರ ನಾಗ್‌ ಪುರದ ಪ್ರಕಾಶ್ ಆಮೆ, ಮಂದಾಕಿಣಿ ಆಮೈ ದಂಪತಿಗೆ, 2020ರಲ್ಲಿ ಉಡುಪಿಯ ರವಿಕಟಪಾಡಿಯವರಿಗೆ ಅವರ ನಿಸ್ವಾರ್ಥ ಸೇವೆಗೆ ಪ್ರಶಸ್ತಿ ನೀಡಲಾಯಿತು. 2021ರಲ್ಲಿ ಕಾರವಾರ ಜಿಲ್ಲೆಯ ಅಂಕೋಲ ತಾಲ್ಲೂಕಿನ ಪದ್ಮಶ್ರೀ ಪುರಸ್ಕೃತೆ ಹಾಲಕ್ಕಿ ಸಮುದಾಯದ ಹೋರಾಟಗಾರ್ತಿ ಸಾಧಕಿಯಾಗಿರುವಂತಹ ಪದ್ಮಶ್ರೀ ಸುಕ್ರಿ ಬೊಮ್ಮಗೌಡ(ಸುಕ್ರಿ ಅಜ್ಜಿ) ಇವರ ಸೇವೆಗೆ ನೀಡಲಾಯಿತು. 2022ರ 8ನೇ ವರ್ಷದ ಪ್ರಶಸ್ತಿಯನ್ನು ತೆಲಂಗಾಣ ರಾಜ್ಯದ ಪದ್ಮಶ್ರೀ ಡಾ. ಸುನಿತಕೃಷ್ಣನ್ ಇವರಿಗೆ ನೀಡಲಾಯಿತು. 2023ರ 9ನೇ ಮೂಲತ್ವ ವಿಶ್ವ ಪ್ರಶಸ್ತಿಯನ್ನು ಛತ್ತಿಸ್ ಫಡ್ನ ಪದ್ಮಶ್ರೀ ಶ್ರೀಮತಿ ಫಲ್‌ಸನ್ ಬಾಯಿ ಯಾದವ್ ಇವರಿಗೆ ನೀಡಲಾಯಿತು. 2024 ರ 10ನೇ ವರ್ಷದ ಮೂಲತ್ವ, ವಿಶ್ವ ಪ್ರಶಸ್ತಿಯನ್ನು ಉಡುಪಿ ಜಿಲ್ಲೆಯ ಮುಳುಗು ತಜ್ಞನೆಂದೆ ಖ್ಯಾತಿ ಪಡೆದ ಶ್ರೀಯುತ ಈಶ್ವರ್ ಮಲ್ಪೆ ಇವರಿಗೆ ನೀಡುವುದೆಂದು ನಿರ್ಧರಿಸಲಾಗಿದೆ. ಫಲಕದೊಂದಿಗೆ ರೂ. 100.001 ನಗದು ಕೊಡಲಾಗುವುದು. ಇವರು ಸುಮಾರು 20 ವರ್ಷದಲ್ಲಿ 1000ಕ್ಕೂ ಮಿಕ್ಕಿ ನೀರಿನಲ್ಲಿ ಪ್ರಾಣ ಬಿಟ್ಟ ಮೃತ ದೇಹಗಳನ್ನು ಹುಡುಕಿ ಮೇಲಕ್ಕೆ ತಂದು ತಮ್ಮ ನಿಸ್ವಾರ್ಥ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವರು ಹಾಗೂ ಸುಮಾರು 70ಕ್ಕೂ ಮೀರಿ ನೀರಿನಲ್ಲಿ ಮುಳುಗಿದ ಜೀವವನ್ನು ಉಳಿಸಿದ್ದಾರೆ. ಹಾಗೂ ಜನರ ಅಗತ್ಯ ಸೇವೆಗೆಂದೆ 24/7 ಉಚಿತ ಅಂಬುಲೇನ್ಸ್ ಸೇವೆಯನ್ನು ನೀಡಿರುತ್ತಾರೆ ಎಂದರು. ಈ ಕಾರ್ಯಕ್ರಮವನ್ನು ದಿನಾಂಕ 29.12.2024 ಬೆಳಗ್ಗೆ 10.00 ಗಂಟೆಗೆ  ಶಾರದಾ ವಿದ್ಯಾಲಯದ ಕೊಡಿಯಲ್ ಬೈಲ್ ನಲ್ಲಿ ನೆರವೇರಲಿದೆ.

ನಮ್ಮ ಕಾರ್ಯಕ್ರಮಕ್ಕೆ  ಮಂಗಳೂರು ಮಹಾನಗರಪಾಲಿಕೆಯ ಮೇಯರ್ ಮನೋಜ್ ಕುಮಾರ್ ಹಾಗೂ ಫಿಶರಿಸ್ ಕಾಲೇಜಿನ ಡೀನ್ ಆಗಿರುವ ಡಾ.ಹೆಚ್ ಎನ್ ಆಂಜನೇಯಪ್ಪ, ಶಾರದ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಡಾ.ಎಮ್ ಬಿ ಪುರಾಣಿಕ್‌, ಅಕ್ಷರಸಂತ ಪದ್ಮಶ್ರೀ ಪರೇಕಳ ಹಾಜಬ್ಬ, ಸಮಾಜಸೇವಕರಾದ ಉಡುಪಿಯ ಶ್ರೀ ರವಿ ಕಟಪಾಡಿ, ಡೈಜಿ ವರ್ಲ್ಡ್ ಮೀಡಿಯಾ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ ಹಾಗೂ ಮೋಗವೀರ ಮಹಾಜನ ಸಭಾ ಇದರ ಉಪಧ್ಯಕ್ಷರಾದ ಮೋಹನ್ ಬೇಂಗ್ರೆ  ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. 

ಪತ್ರಿಕಾಗೋಷ್ಠಿಯಲ್ಲಿ ಶ್ರೀಮತಿ ಕಲ್ಪನಾ ಕೋಟ್ಯಾನ್, ಶ್ರೀಮತಿ ಶೈನಿ, ಶ್ರೀಮತಿ ಅಕ್ಷತಾ ಕದ್ರಿ, ಶ್ರೀ ಮಹೇಶ್ ಆಮೀನ್, ಶ್ರೀ ಲಕ್ಷ್ಮೀಶ ಪಿ ಕೋಟ್ಯಾನ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ