ಮಂಗಳೂರು: ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ದ.ಕ.ಜಿಲ್ಲಾ ಪದ್ಮಶಾಲಿ ಮಹಾಸಭಾದ ಕ್ರೀಡೋತ್ಸವವು ದಿನಾಂಕ ಡಿ.22 ಭಾನುವಾರ ಕೊಣಾಜೆಯಲ್ಲಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೀಡಾಂಗಣದಲ್ಲಿ ನಡೆಯಲಿರುವುದು ಎಂದು ಕ್ರೀಡಾ ಸಂಚಾಲಕರಾದ ಸದಾಶಿವ ಶೆಟ್ಟಿಗಾರ್ ಗೋಳಿಜಾರ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿ, ಸಮಾಜ ಸೇವೆಯ ಮುಖ್ಯವಾಹಿನಿಯಲ್ಲಿ ಯುವಜನಾಂಗವನ್ನು ತೊಡಗಿಸುವ ಸಲುವಾಗಿ 1991ರಲ್ಲಿ ಪ್ರಾರಂಭಿಸಿದ ಈ ಉತ್ಸವವು ಮೂವತ್ತೆರಡನೆಯ ವರ್ಷದಲ್ಲಿ ಮನ್ನಡೆಯುತ್ತಿದ್ದು ಸೌಹಾರ್ದ, ಸಾಮರಸ್ಯ ಮತ್ತು ಸೌಮನಸ್ಯವನ್ನು ಸಾಧಿಸುತ್ತಿದೆ.
ಮೂರು ಜಿಲ್ಲೆಗಳಲ್ಲಿರುವ ಪದ್ಮಶಾಲಿ/ಶೆಟ್ಟಿಗಾರ್ರ ಹದಿನಾರು ಶ್ರದ್ಧಾಕೇಂದ್ರಗಳಾದ ವೀರಭದ್ರ ದೇವಸ್ಥಾನಗಳ ಮತ್ತು ಪ್ರಾದೇಶಿಕ ಸಂಘಗಳ ಆತಿಥ್ಯದಲ್ಲಿ ನಡೆಯುತ್ತಿರುವ ಈ ಉತ್ಸವದ ಪ್ರಸಕ್ತ ವರ್ಷದ ಆತಿಥ್ಯವನ್ನು ಬಂಗ್ರಮಂಜೇಶ್ವರ ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನವು ವಹಿಸಿರುತ್ತದೆ. ಸುಮಾರು ಐದು ಸಾವಿರ ಸಮಾಜಬಾಂಧವರು ಒಗ್ಗೂಡುವ ಈ ಬೃಹತ್ ಸಮಾವೇಶಕ್ಕಾಗಿ ಸಿದ್ಧತೆಗಳು ನಡೆಯತ್ತಿವೆ. ಬಾಲಕ ಬಾಲಿಕೆಯರಿಗಾಗಿ, ಯುವಕರಿಗಾಗಿ ಮತ್ತು ಪ್ರೌಢರಿಗಾಗಿ 22 ವಿಭಾಗಗಳಲ್ಲಿ 75 ವಿಭಿನ್ನ ಅಟೋಟ ಸ್ಪರ್ಧೆಗಳು ನಡೆಯಲಿರುವುದು. ಸುಮಾರು 50 ಮಂದಿ ಕ್ರೀಡಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯೋಜಿತವಾದ ಈ ಸಮಾರಂಭವು ಸಮಾಜದ ಸ್ನೇಹಮಿಲನದ ಅವಕಾಶವನ್ನು ತೆರೆದಿಡುತ್ತಿದೆ.
ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರಿನ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರು ದೀಪಪ್ರಜ್ವಲನೆ ಮಾಡಲಿರುವ ಈ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ.ಖಾದರ್, ಮಂಗಳೂರು ಲೋಕಸಭಾ ಸದಸ್ಯರಾದ ಬೃಜೇಶ್ ಚೌಟ, ಮಂಗಳೂರು ವಿಶ್ವವಿದ್ಯಾನಿಲಯದ ಉನ್ನತ ಅಧಿಕಾರಿಗಳು, ಹದಿನಾರು ದೇವಸ್ಥಾನಗಳ ಮೊಕ್ತೇಸರರು ಮತ್ತಿತರ ಗಣ್ಯರು ಭಾಗವಹಿಸಲಿರುವರು. ಇದರ ಜೊತೆಗೆ ಸಮಾಜ ಸಂಘಟನೆಗಾಗಿ ಶ್ರಮಿಸಿದ ಸಾಧಕರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ನವೀನ ಮಾದರಿಯ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡಲಾಗುವುದು ಮತ್ತು ವಿವಾಹಾಕಾಂಕ್ಷಿ ವಧುವರರ ಅನುಕೂಲಕ್ಕಾಗಿ ಪರಿಣಯವೇದಿಕೆಯು ಕಾರ್ಯಾಚರಿಸಲಿರುವುದು. ಅದರೊಂದಿಗೆ ನವೀಕರಿಸಿದ ಪದ್ಮಶಾಲಿ ಮಹಾಸಭಾದ ವೆಬ್ ಸೈಟನ್ನು ಲೊಕಾರ್ಪಣೆ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಾ ಸಭಾದ ಅಧ್ಯಕ್ಷರಾದ ರವಿ ಶೆಟ್ಟಿಗಾರ್ ಕಾರ್ಕಾಳ, ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಲಕ್ಷ್ಮಣ್ ಕೊಡಿಯಾಲ್ ಬೈಲ್, ಮಹಾಸಭಾದ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್ರಾಯ ಶೆಟ್ಟಿಗಾರ್, ಗಿರೀಶ್ ಶೆಟ್ಟಿಗಾರ್ ವಿಟ್ಲ, ಮನೋರಂಜನ್ ಕರೆ, ಡಾ. ಲೋಕರಾಜ್ ವಿಟ್ಲ ಉಪಸ್ಥಿತರಿದ್ದರು.