ಮಂಗಳೂರು: 1946ರಲ್ಲಿ ರಚನೆಯಾದ ಸಂವಿಧಾನ ರಚನಾ ಸಭೆಯು ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನದ ಕರಡು ರಚನೆಗೆ ಸಮಿತಿ ರಚಿಸಿತ್ತು. ನವೆಂಬರ್ 1949ರಂದು ಸಂವಿಧಾನದ ಕರಡನ್ನು ರಚನಾ ಸಭೆಯ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಅರ್ಪಿಸುತ್ತಾರೆ. ಬಳಿಕ ಜನವರಿ 26 1950ರಂದು ಭಾರತದ ಅಧಿಕೃತ ಸಂವಿಧಾನವಾಗಿ ಘೋಷಿಸಲ್ಪಡುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ 75 ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಣೆ ಮತ್ತು ಸಂವಿಧಾನ ಜಾಗೃತಿಗಾಗಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆಯು 26 ನವೆಂಬರ್ 2024 ರಿಂದ ಜನವರಿ 26, 2025ರವರೆಗೆ ಸಂವಿಧಾನ ಸನ್ಮಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸನ್ಮಾನ ಸಮಿತಿಯ ಜಿಲ್ಲಾ ಸಂಚಾಲಕರಾದ ಪ್ರೇಮಾನಂದ ಶೆಟ್ಟಿ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಡಿ.21ರಂದು ಮಂಗಳೂರು ಪುರಭವನದಲ್ಲಿ "ಸಂವಿಧಾನ ಸನ್ಮಾನ ಹಾಗೂ ಸಂವಿಧಾನ ಬದಲಾಯಿಸಿದ್ದು ಯಾರು" ಪುಸ್ತಕ ಲೋಕಾರ್ಪಣೆ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ವಿಕಾಸ್ ಪುತ್ತೂರು ಮತ್ತು ಸಹಸಂಚಾಲಕರು ವಿನಯ್ ನೇತ್ರ ಉಪಸ್ಥಿತರಿದ್ದರು.