ಮಂಗಳೂರು: ಉಳ್ಳಾಲದ ಪೆರಿಬೈಲ್ ಮಸೀದಿಯಲ್ಲಿ ಪೊಲೀಸರು ಮೈಕ್ ಬಂದ್ ಮಾಡಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಕಾನೂನು ಪ್ರಕಾರವೇ ಮೈಕ್ ಬಳಸುತ್ತಿದ್ದರೂ ತಡೆದ ಪೊಲೀಸರ ಕ್ರಮ ಸರಿಯಲ್ಲ. ಇದರ ವಿರುದ್ದ ಪ್ರತಿಭಟನೆ ಮಾಡಲಿದ್ದೇವೆ ಎಂದು ಮಸೀದಿ ಆಡಳಿತ ಎಚ್ಚರಿಕೆ ನೀಡಿದೆ.
ಪೆರಿಬೈಲ್ ಮಸೀದಿಯಲ್ಲಿ ಧಾರ್ಮಿಕ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಸಂಜೆ 7 ಗಂಟೆ ವೇಳೆಗೆ ಮಸೀದಿಯಲ್ಲಿ ಧ್ವನಿವರ್ಧಕ ಬಳಸಲಾಗಿತ್ತು. ಇದೇ ವೇಳೆ, ಅನುಮಾನಾಸ್ಪದ ಚಟುವಟಿಕೆ ಆರೋಪಿಸಿ ಅಪರಿಚಿತರು '112' ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದರು. ತಕ್ಷಣ ಮಸೀದಿಗೆ ದೌಡಾಯಿಸಿದ ಉಳ್ಳಾಲ ಪೊಲೀಸರು, ಧಾರ್ಮಿಕ ಕಾರ್ಯಕ್ರಮ ತಡೆದು ಗದರಿಸಿದ್ದಾರೆ ಎಂದು ಬಗ್ಗೆ ಮಸೀದಿಯ ಮುಖಂಡರು ಆರೋಪಿಸಿದ್ದಾರೆ.
ಪೊಲೀಸರ ನಡೆಯ ವಿರುದ್ಧ ಪೆರಿಬೈಲ್ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಧಾರ್ಮಿಕ ಕಾರ್ಯಕ್ರಮದ ವೇಳೆ ಪೊಲೀಸರು ಬಂದು ಗದರಿಸಿದ್ದಾರೆ. ನಾವು ಸಮಯವಲ್ಲದ ಸಮಯದಲ್ಲಿ ಮೈಕ್ ಬಳಸಿಲ್ಲ. ಸಂಜೆ 7 ಗಂಟೆಗೆ ಮೈಕ್ ಹಾಕಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ರಾತ್ರಿ 10 ಗಂಟೆವರೆಗೆ ಮೈಕ್ ಬಳಸಲು ಅವಕಾಶ ಇದೆ. ಮತ್ತೆ ನಮಗ್ಯಾಕೆ ವಿರೋಧ ಎಂದು ಮುಸ್ಲಿಂ ಮುಖಂಡರು ಪ್ರಶ್ನಿಸಿದ್ದಾರೆ.
ನಾವು ರಾತ್ರಿ 10 ರಿಂದ ಬೆಳಗ್ಗೆ 6 ವರೆಗೂ ಮೈಕ್ ಬಳಸುವುದಿಲ್ಲ ಎಂದು ಮುಚ್ಚಳಿಕೆ ಬರೆದಿದ್ದೇವೆ. ಪೊಲೀಸರು ಮಸೀದಿ, ಮದರಸದ ಬಳಿ ಗದರಿಸುವುದು ಹಾಗೂ ಬೆದರಿಸುವುದನ್ನು ನಿಲ್ಲಿಸಬೇಕು. ಜಿಲ್ಲಾಡಳಿತ ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಬೇಕು. ಮಂಗಳೂರು ಪೊಲೀಸ್ ಕಮಿಷನರ್ ಗಮನಕ್ಕೆ ಬರುವವರೆಗೂ ಹೋರಾಡುತ್ತೇವೆ ಎಂದು ಪೆರಿಬೈಲ್ ಮಸೀದಿ ಅಧ್ಯಕ್ಷ ಅಬ್ಬಾಸ್ ಹಾಜಿ ಹೇಳಿದ್ದಾರೆ