ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಕೀರ್ತಿಶೇಷ ಕುಂಬ್ಳೆ ಸುಂದರ ರಾವ್ ಸಂಸ್ಕರಣ ವೇದಿಕೆ ಜಂಟಿಯಾಗಿ ಆಯೋಜಿಸುವ ಪ್ರತಿಷ್ಠಿತ ಕಾರ್ಯಕ್ರಮ, ಸಂಸ್ಕರಣಾ ಪ್ರಶಸ್ತಿ ಪ್ರದಾನ ಮತ್ತು ತಾಳಮದ್ದಲೆ ಕಾರ್ಯಕ್ರಮ ಇದೇ ಬರುವ ಡಿಸೆಂಬರ್ 14, ಶನಿವಾರ ಸಂಜೆ 5.00 ರಿಂದ ಮಂಗಳೂರಿನ ಕೆನರಾ ಪದವಿ ಪೂರ್ವ ಕಾಲೇಜಿನ ತೆರೆದ ಸಭಾಂಗಣದಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಶಶಿರಾಜ್ ಕಾವೂರು ತಿಳಿಸಿದರು.
ಕಳೆದ ಬಾರಿಯಿಂದ ಆರಂಭಗೊಂಡ ಈ ಪ್ರಶಸ್ತಿ 2023 ರನೆ ಸಾಲಿನಲ್ಲಿ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರಿಗೆ ನೀಡಲಾಗಿತ್ತು. ಈ ಬಾರಿ ಹಿರಿಯ ಯಕ್ಷಗಾನ ಕಲಾವಿದರೂ ಮತ್ತು ಕುಂಬ್ಳೆಯವರ ಒಡನಾಡಿಯೂ ಆಗಿದ್ದ ಶ್ರೀ ಅರುವ ಕೊರಗಪ್ಪ ಶೆಟ್ಟರಿಗೆ 'ಕುಂಬ್ಳೆ ಸಂಸ್ಕರಣ ಪ್ರಶಸ್ತಿ-2024' ನೀಡಲಾಗುತ್ತದೆ. ಪ್ರಶಸ್ತಿಯು 25,000/- ನಗದು. ಸನ್ಮಾನ ಪತ್ರ, ಸ್ಮರಣಿಕೆ ಮುಂತಾದುವನ್ನು ಒಳಗೊಂಡಿದೆ.
ಹಿರಿಯ ಯಕ್ಷಗಾನ ಅರ್ಥದಾರಿ ಮತ್ತು ವಿಮರ್ಶಕರಾದ ಶ್ರೀ ಭಾಸ್ಕರ ರೈ ಕುಕ್ಕುವಳ್ಳಿಯವರು ಕುಂಬ್ಳೆಯವರ ಸಂಸ್ಕರಣೆ ಮಾಡಲಿದ್ದಾರೆ. ಅಗರಿ ಎಂಟರ್‌ಪ್ರೈಸಸ್‌ನ ಮಾಲಕರಾದ ಶ್ರೀ ಆಗರಿ ರಾಘವೇಂದ್ರ ರಾವ್ ಮತ್ತು ಕೆನರಾ ಪದವಿಪೂರ್ವ ಕಾಲೇಜಿನ ಡೀನ್ ಶ್ರೀ ಗೋಪಾಲಕೃಷ್ಣ ಶೆಟ್ಟಿಯವರು ಅತಿಥಿಗಳಾಗಿ ಬರಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ನಾ.ದಾಮೋದರ ಶೆಟ್ಟಿಯವರು ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಹಿರಿಯ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ 'ಸುಧನ್ವ ಮೋಕ್ಷ' ಎಂಬ ತಾಳಮದ್ದಲೆ ನಡೆಯಲಿದೆ. ಹಿಮ್ಮೇಳದಲ್ಲಿ ಹಿರಿಯ ಯಕ್ಷಗಾನ ಭಾಗವತರದ ಶ್ರೀ ದಿನೇಶ ಅಮ್ಮಣ್ಣಾಯ, ಮದ್ದಳೆಯಲ್ಲಿ ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ ಮತ್ತು ಚೆಂಡೆಯಲ್ಲಿ ಶ್ರೇಯಸ್ ಪಾಳಂದೆ ಸಹಕರಿಸಲಿದ್ದು, ಮುಮ್ಮೇಳದಲ್ಲಿ ಡಾ.ಎಂ.ಪ್ರಭಾಕರ ಜೋಶಿ, ಉದರೆ ಆಶೋಕ ಭಟ್ ಮತ್ತು ವಾಸುದೇವ ರಂಗಾಭಟ್ ಮಧೂರು ಅರ್ಥ, ಹೇಳಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸತ್ಯನಾರಾಯಣ ಕೆ, ಕರುಣಾಕರ ಶೆಟ್ಟಿ, ನಾಗೇಶ್ ಶೆಟ್ಟಿ ಬಜಾಲ್ ಉಪಸ್ಥಿತರಿದ್ದರು.