ಉಳ್ಳಾಲ: ತಾಂತ್ರಿಕ ದೋಷದಿಂದ ಅನಿಲ ಟ್ಯಾಂಕರ್‌ನಿಂದ ಹೈಡ್ರಾಲಿಕ್ ಆಸಿಡ್ ಸೋರಿಕೆಯಾಗುತ್ತಿರುವ ಘಟನೆ ರಾಷ್ಟ್ರೀಯ ಹೆದ್ದಾರಿ ಕೋಟೆಕಾರ್ ಉಚ್ಚಿಲ ಸಮೀಪ ನಡೆದಿದ್ದು, ಘಟನಾ ಸ್ಥಳದಲ್ಲಿ ಉಳ್ಳಾಲ, ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಬೀಡುಬಿಟ್ಟಿದ್ದಾರೆ. ಎಂಆರ್‌ಪಿಎಲ್ ತಂಡ ಮತ್ತು ಅಗ್ನಿ ಶಾಮಕ ದಳದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಕಾರವಾರದಿಂದ ಕೊಚ್ಚಿಗೆ ಹೈಡ್ರಾಲಿಕ್ ಆಸಿಡ್ ಸಾಗಿಸುತ್ತಿದ್ದ ಟ್ಯಾಂಕರ್‌ನಲ್ಲಿ ಅನಿಲ ಸೋರಿಕೆಯಾಗಿದೆ. ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುವುದನ್ನು ಗಮನಿಸಿದ ಚಾಲಕ ಹೆದ್ದಾರಿ ಬಳಿ ಟ್ಯಾಂಕರ್ ಅನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಪೊಲೀಸರಿಗೆ ಸ್ಥಳೀಯರು ಮಾಹಿತಿಯನ್ನು ನೀಡಿದ್ದಾರೆ. ಅನಿಲ ಸೋರಿಕೆಯಿಂದ ಶ್ವಾಸಕೋಶದ ತೊಂದರೆಯುಂಟಾಗುವ ಸಾಧ್ಯತೆಯಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳ, ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೆದ್ದಾರಿಯಲ್ಲಿ ವಾಹನ ಸಂಚಾರ ಯಥಾಸ್ಥಿತಿಯಲ್ಲಿದ್ದು, ಯಾವುದೇ ಸೂಚನೆಗಳನ್ನು ಇಲಾಖೆ ಈವರೆಗೆ ಸ್ಥಳೀಯರಿಗೆ, ವಾಹನ ಸವಾರರಿಗೆ ನೀಡಿಲ್ಲ ಎಂದು ತಿಳಿದು ಬಂದಿದೆ.