image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕನ್ನಡ ಶಾಲೆ ಸಶಕ್ತವಾದರೆ ಮಾತ್ರ ಕನ್ನಡದ ಸಂರಕ್ಷಣೆ-ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ

ಕನ್ನಡ ಶಾಲೆ ಸಶಕ್ತವಾದರೆ ಮಾತ್ರ ಕನ್ನಡದ ಸಂರಕ್ಷಣೆ-ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ

ಮಂಗಳೂರು : ಕನ್ನಡ ಭಾಷೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕನ್ನಡ ಶಾಲೆಗಳನ್ನು ಉಳಿಸುವುದು ಅತೀ ಅಗತ್ಯ. ರಾಜ್ಯದಲ್ಲಿ ಕನಿಷ್ಠ ಹಿರಿಯ ಪ್ರಾಥಮಿಕ ಹಂತದವರೆಗೆ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ಇತರ ಯಾವುದೇ ಭಾಷೆಗಳಿಗೆ ಕಡಿಮೆ ಇಲ್ಲದೆ ಸಶಕ್ತಗೊಳಿಸುವ ಕಾರ್ಯವಾಗಬೇಕು ಎಂದು ವಿಶ್ರಾಂತ ಕುಲಪತಿ , ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ  ಡಾ.ಕೆ.ಚಿನ್ನಪ್ಪ ಗೌಡ ಹೇಳಿದರು. ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಬುಧವಾರ ನಡೆದ ಪ್ರೆಸ್ ಕ್ಲಬ್ ಗೌರವ ಅತಿಥಿ  ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕನ್ನಡ ಭಾಷೆಯನ್ನು ಕಾನೂನಿನ ಮೂಲಕ ಉಳಿಸುವುದು ಸಾಧ್ಯವಿಲ್ಲ. ಬದಲಾಗಿ ಕನ್ನಡ ಮಾಧ್ಯಮ ಶಾಲೆಗಳು ಆಂಗ್ಲ ಮಾಧ್ಯಮ ಶಾಲೆಗಳಿಗಿಂತ ಗುಣಮಟ್ಟದಲ್ಲಿ ಕೊರತೆ ಆಗದಂತೆ ಗಮನ ಹರಿಸಬೇಕು. ಕನ್ನಡ ಶಾಲೆಯ ಮಕ್ಕಳು ಅವಕಾಶದಲ್ಲಿ ಹಿಂದುಳಿಯದಂತೆ, ಉದ್ಯೋಗದ ಕೊರತೆಯಾಗದಂತೆ ಆಡಳಿತ ವ್ಯವಸ್ಥೆ ನಿಗಾ ವಹಿಸಬೇಕು ಎಂದರು. ಕನ್ನಡ ಸಾಹಿತ್ಯ ಸಮ್ಮೇಳನಗಳ ಸ್ವರೂಪದಲ್ಲಿ ಬದಲಾವಣೆಯಾಗಬೇಕು. ಸಮ್ಮೇಳನ ಕೇವಲ ಜಾತ್ರೆ, ಉತ್ಸವಕ್ಕೆ ಸೀಮಿತವಾಗಬಾರದು.ಈಗ ಸಮ್ಮೇಳನಕ್ಕಾಗಿ ವ್ಯಯವಾಗುತ್ತಿರುವ ಕೋಟ್ಯಾಂತರ ಹಣವನ್ನು ಆದಷ್ಟು ಮಿತಗೊಳಿಸಬೇಕು. ಆ ಮೊತ್ತವನ್ನು ಜಿಲ್ಲೆಯ ಅಥವಾ ತಾಲೂಕುಗಳ ಕನ್ನಡ ಶಾಲೆಗಳ ಬಲವರ್ಧನಗೆ ಬಳಸಬೇಕು. . ಶಿಕ್ಷಕರು ಅಥವಾ ಕಟ್ಟಡವೇ ಇಲ್ಲದ ಶಾಲೆಗಳಿಗೆ ವಿದ್ಯಾರ್ಥಿಗಳ ನಿರೀಕ್ಷೆ ಸಾಧ್ಯವಾಗದು. ಹಾಗಾಗಿ ಕನ್ನಡ ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚಿನ ಒತ್ತು ಅಗತ್ಯ ಎಂದು ಅವರು ಹೇಳಿದರು.

ಭೂತ ಕಟ್ಟುತ್ತಿದ್ದ ಪಕ್ರು ಪರವ ಅವರನ್ನು ಬಾಲ್ಯದಲ್ಲಿ ವಿಸ್ಮಯದಿಂದ ನೀಡುತ್ತಿದ್ದೆ. ಭೂತಾರಾಧನೆಯ ಬಗ್ಗೆ ಆಸಕ್ತಿ ಬೆಳೆಯಲು ಇದು ಕಾರಣವಾಯಿತು ಎಂದು ಬಾಲ್ಯದ ದಿನಗಳನ್ನು ಸ್ಮರಿಸಿಕೊಂಡ ಅವರು  ಯಾವುದೇ ಭಾಷೆ ಬೆಳೆಯಬೇಕಾದರೆ, ಆ ಭಾಷೆಯ ಹಿರಿಮೆ, ಸಂಸ್ಕೃತಿ, ಇತಿಹಾಸದ ಕೃತಿಗಳು ಅಂತಾರಾಷ್ಟ್ರೀಯ ಮಟ್ಟದ ಭಾಷೆಗೆ ಅನುವಾದಗೊಳ್ಳುವುದು ಅಗತ್ಯ. ತುಳು ಭಾಷೆ 8ನೇ ಪರಿಚ್ಛೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಪ್ರೊ. ಸುರೇಂದ್ರ ರಾವ್ ಜತೆಗೀಡು ತುಳುವಿನ ಭೂತಾರಾಧನೆಯ ಆಕಾರ- ಪ್ರಾಕಾರಗಳನ್ನು  ಪರಿಚಯಿಸುವ 7 ಸಂಪುಟಗಳನ್ನು ರಚಿಸಿದ್ದೇನೆ.  ಅನುವಾದ ಕೃತಿಗಳೂ ಸ್ವತಂತ್ರ ಕೃತಿಯಷ್ಟೇ ಮಹತ್ವವನ್ನು ಹೊಂದಿದ್ದು, ಮೂಲ ಲೇಖಕರ ಪ್ರತಿಭೆಯೂ ಅನುವಾದಕಾರರಲ್ಲಿ ಇರುತ್ತದೆ ಎಂದು ಅಭಿಪ್ರಾಯ ಪಟ್ಟರು.

ಹಿರಿಯ ಛಾಯಾಗ್ರಾಹಕ ಚಂದ್ರಹಾಸ ಕೋಟೆಕಾರ್  ಕಾರ್ಯಕ್ರಮ ಉದ್ಘಾಟಿಸಿದರು.ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ  ಆರ್., ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಸ್ಥಿತರಿದ್ದರು.

ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ