ಮಂಗಳೂರು: ಸರಕಾರಿ ಶಾಲೆಗಳು ಉಳಿಯಬೇಕಾದರೆ ಸರಕಾರಿ ಉದ್ಯೋಗಿಗಳ ಮಕ್ಕಳನ್ನು ಮತ್ತು ರಾಜಕಾರಣಿಗಳ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಬೇಕು ಎಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಅಂಗವಾಗಿ ಕಾವೂರಿನ ಬಿಜಿಎಸ್ ಸಭಾಂಗಣದಲ್ಲಿ ಮಂಗಳವಾರ ದ.ಕ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಿಗೆ ಬಿಜಿಎಸ್ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿ, ರಾಜಕಾರಣಿಗಳ ಮಕ್ಕಳು ಸರಕಾರಿ ಶಾಲೆಯಲ್ಲಿ ಓದಿದರೆ ಅಲ್ಲಿಯ ವ್ಯವಸ್ಥೆ ಸುಧಾರಿಸಲು ಸಹಕಾರಿಯಾಗುತ್ತದೆ ಎಂದರು.
ಸಮಾಜದ ದುರ್ಬಲ ವರ್ಗದವರಿಗೆ ಶಿಕ್ಷಣ ನೀಡಬೇಕು ಎಂಬ ತುಡಿತದಿಂದ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರು ಆದಿಚುಂಚನಗಿರಿ ಮಠದಿಂದ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು. ಬಡವರ್ಗದ ಬುದ್ದಿವಂತ ಮಕ್ಕಳಿಗೂ ಅತ್ಯುನ್ನತ ಮಟ್ಟದ ಶಿಕಣ ದೊರೆಯಬೇಕು ಎಂಬ ದೃಷ್ಟಿಯಿಂದ ಆರನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ನೀಡುವ ಶಾಲೆಗಳನ್ನು ಶೀಘ್ರ ಸ್ಥಾಪಿಸಲಾಗುವುದು. ಈ ಶಾಲೆಗೆ ಅರ್ಜಿ ಹಾಕುವ ವಿಧಾನ ಇರುವುದಿಲ್ಲ. ಮಠ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸಿಕೊಳ್ಳಲಿದೆ ಎಂದರು. ಅರ್ಜಿ ಹಾಕುವ ವ್ಯವಸ್ಥೆ ಮಾಡಿದರೆ ಶಿಪಾರಾಸು ಮಾಡುವುದು ಪ್ರಾರಂಭ ಆಗುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಸಂತ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖವಿದ್ದಂತೆ. ಸಮಾಜಕ್ಕೆ ಸಂತರ ಅನಿವಾರ್ಯವಿದೆ. ಲೌಕಿಕ ಶಿಕ್ಷಣದ ಜತೆ ಆಧ್ಯಾತ್ಮಿಕ ಶಿಕ್ಷಣ ಬೇಕು ಎಂದರು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ಮಾತನಾಡಿ,ಮಂಗಳೂರು ಕಾವೂರಿನಲ್ಲಿ 54 ಮಕ್ಕಳಿಂದ ಆರಂಭಗೊಂಡ ಜಿಜಿಎಸ್ ಶಿಕ್ಷಣ ಸಂಸ್ಥೆ ಇಂದು ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿ ಅವರ ದಿವ್ಯಾನುಗ್ರಹದಿಂದ ಬೆಳೆದುನಿಂತು ರಜತಮಹೋತ್ಸವ ಆಚರಿಸುತ್ತಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ, ಪರಮಪೂಜ್ಯ ಜಗದ್ಗುರು ಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಅಂಗವಾಗಿ ನ.26 ಹಾಗೂ ಜ. 1 ಮತ್ತು 2 ರಂದು ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮ, ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರಿಗೆ ಗುರುವಂದನೆ ಹಾಗೂ ರಜತ ತುಲಾಭಾರ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ದ.ಕ. ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರಾದ ಡಾ.ಕೆ. ಚಿನ್ನಪ್ಪ ಗೌಡ (ಸಾಹಿತ್ಯ), ಪ್ರೊ.ಕೆ.ವಿ.ರಾವ್ (ವಿಜ್ಞಾನ), ಗುರುವಪ್ಪ ಎನ್.ಟಿ. ಬಾಳೆಪುಣಿ (ಮಾಧ್ಯಮ), ಡಾ. ರಮೇಶ್ ಡಿ.ಪಿ., ಡಾ. ಸತೀಶ್ ಕಲ್ಲಿಮಾರ್ (ವೈದ್ಯಕೀಯ), ಪ್ರಕಾಶ್ ಅಂಚನ್ ಬಂಟ್ವಾಳ (ಶಿಕ್ಷಣ), ಮಾಧವ ಸುವರ್ಣ (ಧಾರ್ಮಿಕ), ಭಕ್ತಿ ಭೂಷಣ್‌ದಾಸ್ (ಗೋ ಸೇವೆ), ಪುಷ್ಪಾವತಿ ಬುಡ್ಲೆಗುತ್ತು (ನಾಟಿ ವೈದ್ಯೆ), ವೀಣಾ ಕುಲಾಲ್ (ಸಮಾಜಸೇವೆ), ನರಸಿಂಹ ರಾವ್ ದೇವಸ್ಯ, ಡಾ.ಕೆ.ಎಸ್. ಗೋಪಾಲಕೃಷ್ಣ ಕಾಂಚೋಡು, ಸುರೇಶ್ ಬಲ್ನಾಡು (ಕೃಷಿ), ಜಗದೀಶ್ ಆಚಾರ್ಯ (ಸಂಗೀತ), ಮಂಜುಳಾ ಸುಬ್ರಹ್ಮಣ್ಯ (ನೃತ್ಯ), ಶಿವರಾಮ ಪಣಂಬೂರು (ಯಕ್ಷಗಾನ), ಸುಜಾತ ಮಾರ್ಲ (ಯೋಗ), ಸಚಿನ್ ಸುಂದರ ಗೌಡ, ರಾಧಾಕೃಷ, ಕೇಶವಅಮೈ, ಕುಸುಮಾಧರ (ಉದ್ಯಮ), ಅಭಿಷೇಕ್ ಶೆಟ್ಟಿ (ಕ್ರೀಡೆ), ಮಾಧವ ಉಳ್ಳಾಲ್ (ಪರಿಸರ), ವಿಕ್ರಂ ಬಿ. ಶೆಟ್ಟಿ (ಚಿತ್ರಕಲೆ) ಅವರಿಗೆ "ಬಿಜಿಎಸ್ ಕರಾವಳಿ ರತ್ನ" ಪ್ರಶಸ್ತಿ ಪ್ರದಾನ ಮಾಡಲಾಯಿತು.
ರಜತ ಮಹೋತ್ಸವ ಸಮಿತಿ ಅಧ್ಯಕ್ಷರಾದ ಶಾಸಕ ಡಾ.ವೈ. ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸ್ಥಳೀಯ ಕಾರ್ಪೋರೇಟರ್ ಸುಮಂಗಳಾ ಮುಖ್ಯ ಅತಿಥಿಯಾಗಿದ್ದರು.
ಮಾಜಿ ಶಾಸಕ ಸಂಜೀವ ಮಠಂದೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಣದೀಪ್ ಕಾಂಚನ್ ವಂದಿಸಿದರು. ಬಿಜಿಎಸ್ ಕಾಲೇಜು ಪ್ರಾಂಶುಪಾಲ ಸುಬ್ರಹ್ಮಣ್ಯ ಸಿ. ಕಾರ್ಯಕ್ರಮ ನಿರೂಪಿಸಿದರು