ಮಂಗಳೂರು: 2011ರಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ನಿರಾಶ್ರಿತ ಕುಟುಂಬಗಳು ಸುಳ್ಳೇರಿ ಗ್ರಾಮದ ಸರ್ವೆ ನಂಬರ್ 65/1ಪಿ1 ರ ಸರ್ಕಾರಿ ಜಮೀನಿನಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದ ಸಂದರ್ಭದಲ್ಲಿ ಆಡಳಿತ ವ್ಯವಸ್ಥೆ ಅವರ ಮೇಲೆ ದೌರ್ಜನ್ಯವೆಸಗಿತ್ತು. ಮುಂದೆ ಅನೇಕ ಹೋರಾಟಗಳು ನಡೆದು ಜಿಲ್ಲಾಡಳಿತ 190 ಎಕ್ರೆ ಜಮೀನನ್ನು ಗಿರಿಜನ ಪುನರ್ವಸತಿಗೆ ಎಂದು ಮೀಸಲು ಇಟ್ಟು ಆದೇಶವನ್ನು ಮಾಡಿರುತ್ತದೆ. ಇದೆ ಸಂದರ್ಭದಲ್ಲಿ ಒಂದಷ್ಟು ಪ್ರಭಾವಿ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಆ ಐದು ಕುಟುಂಬಗಳು ವಾಸವಾಗಿದ್ದ ಜಮೀನನ್ನು ಬೆಳ್ತಂಗಡಿ ತಾಲೂಕು ಪಂಚಾಯತ್‌ಗೆ ಸಾರ್ವಜನಿಕ ಉದ್ದೇಶಕ್ಕೆ 15 ವರ್ಷ ಪರಭಾರೆ ನಿಷೇಧ ಮಾಡಬಾರದು ಎಂಬ ಷರತ್ತಿನೊಂದಿಗೆ ಮೀಸಲಿಡಲಾಗುತ್ತದೆ. ಇದು ಸುಕ್ಕೇರಿ ಗ್ರಾಮದ ನಾಯಿದ ಗುರಿಯ ಮಲೆಕುಡಿಯ ಸಮುದಾಯದ ಜನರಿಗೆ ಹಕ್ಕು ಪತ್ರ ಸಿಗಬಾರದು ಎಂದು ನಡೆಸಿದ ಷಡ್ಯಂತ್ರ ಎಂದು ಸ್ಪಷ್ಟವಾಗಿ ತಿಳಿಯುತ್ತದೆ ಎಂದು ಮಲೆಕುಡಿಯರ ಸಂಘದ ಅಧ್ಯಕ್ಷ ಶ್ರೀದರ್ ಗೌಡ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ತಕ್ಷಣ ಗಿರಿಜನ ಪುನರ್ವಸತಿಗೆ ಮೀಸಲಿಟ್ಟ ಜಾಗವನ್ನು ಗಡಿ ಗುರುತು ಮಾಡಿ ಐಟಿಡಿಪಿ ಇಲಾಖೆಗೆ ಹಸ್ತಾಂತರ ಮಾಡಬೇಕು. ನಾಯಿದಗುರಿಯಲ್ಲಿ ವಾಸವಾಗಿರುವ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ರಾಷ್ಟ್ರೀಯ ಉದ್ಯಾನವನದ ಸಮಸ್ಯೆಯ ಮಧ್ಯೆ ಕಸ್ತೂರಿ ರಂಗನ್ ವರದಿಯ ಆತಂಕ, ನಕ್ಸಲ್ ಸಮಸ್ಯೆ ಕೂಡ ಇವತ್ತು ಮಲೆಕುಡಿಯ ಸಮುದಾಯದಕ್ಕೆ ಕಾಡುತ್ತಿದ್ದು ಅನೇಕ ಕಾನೂನಾತ್ಮಕ ಸಮಸ್ಯೆಗಳನ್ನು ಮಲೆಕುಡಿಯ ಸಮುದಾಯ ಎದುರಿಸುತ್ತಿದೆ ಎಂದರು.
ಮಲೆಕುಡಿಯ ಸಮುದಾಯದಲ್ಲಿರುವ ಆತಂಕವನ್ನು ನಿವಾರಿಸುವ ಸಲುವಾಗಿ ಮಾನ್ಯ ಜಿಲ್ಲಾಧಿಕಾರಿಗಳು ತಕ್ಷಣ ಮಲೆಕುಡಿಯ ಸಮುದಾಯದ ಜನರ ಸಭೆ ಕರೆದು ಆತಂಕ ನಿವಾರಣೆ ಮಾಡಬೇಕು ಎಂದು ಆಗ್ರಹಿಸುತ್ತೇವೆ. ಇನ್ನು ಒಂದು ತಿಂಗಳ ಒಳಗಾಗಿ ಜಿಲ್ಲಾಡಳಿತ ಸೂಕ್ತ ಸ್ಪಂದನೆಯನ್ನು ನೀಡದೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಅಹೋರಾತ್ರಿ ಧರಣಿ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ಜಿಲ್ಲಾಡಳಿತಕ್ಕೆ ಮಾಧ್ಯಮಗಳ ಮೂಲಕ ತಿಳಿಸಲು ಬಯಸುತ್ತೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಎಳನೀರು. ವಸಂತಿ ನೆಲ್ಲಿಕಾರು, ಬಾಲಕೃಷ್ಣ, ಗಣೇಶ್ ಮತ್ತು ಸಂಜೀವ ಉಪಸ್ಥಿತರಿದ್ದರು.