ಮಂಗಳೂರು: ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡ ರಾಷ್ಟೀಯ ಪತ್ರಿಕಾ ದಿನದ ಕಾರ್ಯ ಕ್ರಮದ ಅಂಗವಾಗಿ ನಗರದ ಹಿರಿಯ ಪತ್ರಿಕಾ ವಿತರಕ ನಾಗರಾಜ್ ಅವರನ್ನು ಪತ್ರಿಕಾ ಭವನದಲ್ಲಿ ಮಂಗಳವಾರ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ, ಮಂಗಳೂರು ನಗರಾಭಿವವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ ಮಾತನಾಡುತ್ತಾ, ಸಮಾಜವನ್ನು ಕಾಲಕಾಲಕ್ಕೆ ಎಚ್ಚರಿಸುವ ಕೆಲಸವನ್ನು ಪತ್ರಕರ್ತರು ಮಾಡುತ್ತಾ ಬಂದಿದ್ದಾರೆ. ದಿನ ನಿತ್ಯದ ಆಗುಹೋಗು ಗಳನ್ನು ಜನರಿಗೆ ತಲುಪಿಸುವ ಮಹತ್ತರ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬರುತ್ತಿರುವ ಮಾಧ್ಯಮ ಬಗ್ಗೆ ಸಮಾಜದಲ್ಲಿ ಗೌರವದ ಸ್ಥಾನ ಪಡೆದುಕೊಂಡಿದೆ. ಪತ್ರಕರ್ತರು ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತ ಬಂದಿರುವುದನ್ನು ನಾನು ಗಮನಿಸಿದ್ದೇನೆ ಎಂದ ಅವರು ರಾಷ್ಟ್ರೀಯ ಪತ್ರಿಕಾ ದಿನದ ಆಚರಣೆಯ ಸಂದರ್ಭದಲ್ಲಿ ಪತ್ರಕರ್ತರಿಗೆ ಶುಭ ಹಾರೈಸಿದರು
ಸನ್ಮಾನ ಸ್ವೀಕರಿಸಿದ ಪತ್ರಿಕಾ ವಿತರಕ ನಾಗರಾಜ್ ಮಾತನಾಡುತ್ತಾ,“ರಾಷ್ಟ್ರೀಯ ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಪತ್ರಿಕಾ ವಿತರಕರಾಗಿರುವ ನಮ್ಮಂತವರನ್ನು ಗುರುತಿಸಿ, ಪತ್ರಿಕಾ ಭವನಕ್ಕೆ ಕರೆದು ಸನ್ಮಾನಿಸಿರುವುದು ಅತೀವ ಸಂತಸ ತಂದಿದೆ. ಇಂತಹ ಕಾರ್ಯಕ್ರಮ ಆಯೋಜನೆ ಮಾಡಿರುವ ಸಂಘಕ್ಕೆ ಧನ್ಯವಾದಗಳು” ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಮಾತನಾಡುತ್ತಾ,ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಈ ಬಾರಿ ಬದಲಾಗುತ್ತಿ ರುವ ಮಾಧ್ಯಮ ಗಳ ಸ್ವರೂಪ ಎಂಬ ವಿಚಾರವನ್ನು ಮುಂದಿಟ್ಟುಕೊಂಡು ರಾಷ್ಟ್ರೀಯ ಪತ್ರಿಕಾ ದಿನವನ್ನು ಆಚರಿಸುತ್ತಿದೆ.ಆದರೆ ಮಾಧ್ಯಮಗಳ ಇಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಬದಲಾಗಿರುವ ಮಾಧ್ಯಮಗಳ ಸ್ವರೂಪದ ಈಗಾಗಲೇ ಬದಲಾಗಿದೆ.ಈ ಬಗ್ಗೆ ನಾವುಯೋಚಿಸಬೇಕಾಗಿದೆ. ಹಿಂದೆ ಸುದ್ದಿಯನ್ನು ಪ್ರಕಟಮಾಡುವ ಮೊದಲು ಸಾಕಷ್ಟು ಪರಿಶೀಲನೆ ನಡೆಸಿ,ಪರಿಷ್ಕರಿಸುವ ಕ್ರಮ ಇತ್ತು.ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಈ ರೀತಿ ಸುದ್ದಿಯನ್ನು ಸೋಸದೆ ನೇರವಾಗಿ ನವ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವುದು ನಡೆಯುತ್ತಿದೆ. ಇತ್ತೀಚೆಗೆ ಕರ್ನಾಟಕ ಸರಕಾರ ಇದನ್ನು ತಡೆಯಲು ಒಂದು ಕಾಯಿದೆಯನ್ನು ಜಾರಿ ಮಾಡಿದೆ. ಮಾಧ್ಯಮಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಹೊಣೆಗಾರಿಕೆಯಿಂದ ದೂರ ಸರಿಯಬಾರದು.ತಂತ್ರಜ್ಞಾನದ ಬೆಳವಣಿಗೆ, ನವ ಮಾಧ್ಯಮಗಳು ಪ್ರಭಾವದಿಂದ ಪತ್ರಿಕೋದ್ಯಮ ಸಾಕಷ್ಟು ಸವಾಲು ಗಳನ್ನೆದುರಿಸುತ್ತಿದೆ ಎಂದರು.
ವೇದಿಕೆಯಲ್ಲಿ ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಕಾರ್ಯಕ್ರಮ ನಿರೂಪಿಸಿದರು, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.
ಇದೇ ಸಂದರ್ಭದಲ್ಲಿ ಅಕಾಲ ಮರಣಕ್ಕೆ ತುತ್ತಾದ ಪತ್ರಕರ್ತ ಭುವನೇಂದ್ರ ಪುದುವೆಟ್ಟು ಅವರಿಗೆ ಸಭೆಯಲ್ಲಿ ಮೌನ ಪ್ರಾರ್ಥನೆ ಯೊಂದಿಗೆ ಸಂತಾಪ ಸೂಚಿಸಲಾಯಿತು.