image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂಕಪಟ್ಟಿ ಸಮಸ್ಯೆ, ಪರೀಕ್ಷಾ ಶುಲ್ಕ ಹೆಚ್ಚಳ ವಿರುದ್ಧ ಎಬಿವಿಪಿಯಿಂದ ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ

ಅಂಕಪಟ್ಟಿ ಸಮಸ್ಯೆ, ಪರೀಕ್ಷಾ ಶುಲ್ಕ ಹೆಚ್ಚಳ ವಿರುದ್ಧ ಎಬಿವಿಪಿಯಿಂದ ಮಂಗಳೂರು ವಿವಿ ಆಡಳಿತ ಸೌಧಕ್ಕೆ ಮುತ್ತಿಗೆ

ಮಂಗಳೂರು: ಅಂಕಪಟ್ಟಿಯ ಸಮಸ್ಯೆ, ಅವೈಜ್ಞಾನಿಕವಾಗಿ ಕಾಲೇಜಿಗೆ ಶುಲ್ಕಗಳ ಹೆಚ್ಚಳ, ಅವೈಜ್ಞಾನಿಕವಾಗಿ ಪರೀಕ್ಷಾ ಶುಲ್ಕ ಹೆಚ್ಚಳ ಹಾಗೂ ವಿವಿಯ ಹಲವಾರು ಸಮಸ್ಯೆಗಳ ವಿರುದ್ಧ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗದ ವತಿಯಿಂದ ವಿದ್ಯಾರ್ಥಿಗಳು ಇಂದು ಮಂಗಳೂರು ವಿವಿಯ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಬೆಳಿಗ್ಗೆಯೇ ವಿವಿಯ ಕ್ಯಾಂಪಸ್ ನಲ್ಲಿ  ಸೇರಿದ್ದ ವಿದ್ಯಾರ್ಥಿಗಳು ಬಳಿಕ ವಿಶ್ವವಿದ್ಯಾಲಯದ ಆಡಳಿತ ಸೌಧದ ಕಡೆಗೆ ಸಾಗಿ ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ತಡೆಯಲು ಬ್ಯಾರಿಕೇಡ್ ಹಾಕಿದ್ದರೂ ಕ್ಯಾರೆ ಎನ್ನದೆ ಮುನ್ನುಗಿದ್ದರು. ಬಳಿಕ ಪೊಲೀಸರು ಆಡಳಿತ ಸೌಧದ ಗಾಜಿನ ಬಾಗಿಲನ್ನು ಹಾಕಿದ್ದು ವಿದ್ಯಾರ್ಥಿಗಳು ತಳ್ಳಾಟ ನಡೆಸಿದಾಗ ಗಾಜು ಪುಡಿಪುಡಿಯಾಗಿ ಓರ್ವ ಪೋಲೀಸ್ ಹಾಗೂ ವಿದ್ಯಾರ್ಥಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

ಬಳಿಕ ಮಂಗಳೂರು ವಿವಿ ಕುಲಪತಿ ಸ್ಥಳಕ್ಕೆ ಆಗಮಿಸಿ ವಿಶ್ವವಿದ್ಯಾಲಯದ ಆರ್ಥಿಕ ಸಂಕಷ್ಟದ ಬಗ್ಗೆ ವಿವರಿಸಿದ್ದಾರೆ. ಆರ್ಥಿಕ ಸಂಕಷ್ಟದ ಹೊರೆಯನ್ನು ವಿದ್ಯಾರ್ಥಿಗಳ ಮೇಲೆ ಹೊರಿಸುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಇಡೀ ದಿನ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಬಳಿಕ ಸಿಂಡಿಕೇಟ್‌ ಸದಸ್ಯರೊಂದಿಗೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿದ ಕುಲಪತಿಯವರು ನಾಳೆಯೇ ಈ ಬಗ್ಗೆ ಪರೀಶೀಲನೆ ನಡೆಸಲು ಕುಲಸಚಿವರನ್ನು ಕಳುಹಿಸಿಕೊಡುತ್ತಿದ್ದು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದಾರೆ ಹಾಗೂ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ