image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ. 15ರಿಂದ 23ರವರೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಬೆಳ್ಳಿ ಹಬ್ಬ ಸಂಭ್ರಮ ಸೇರಿ ಹಲವು ಕಾರ್ಯಕ್ರಮಗಳು

ನ. 15ರಿಂದ 23ರವರೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಬೆಳ್ಳಿ ಹಬ್ಬ ಸಂಭ್ರಮ ಸೇರಿ ಹಲವು ಕಾರ್ಯಕ್ರಮಗಳು

ಮಂಗಳೂರು: ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ಆಶ್ರಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಹೋಮಿಯೋಪಥಿ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ದೇರಳಕಟ್ಟೆ, ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ತುಂಬೆಯಲ್ಲಿ  ನ.15ರಿಂದ 23ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ರೆವೆರೆಂಡ್. ಫಾದರ್ ರಿಚರ್ಡ್ ಕುವೆಲ್ಲೋ ಅವರು ನಗರದ ಫಾದರ್ ಮುಲ್ಲರ್ ಆಸ್ಪತ್ರೆಯ ಸಭಾಂಗಣದಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ   ಮಾಹಿತಿ ನೀಡಿ, ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಯ ಅಧೀನದಲ್ಲಿ ಕಂಕನಾಡಿಯಲ್ಲಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸೇರಿದಂತೆ ಆರು ವಿಭಾಗಗಳು, ದೇರಳಕಟ್ಟೆ ಹಾಗೂ ತುಂಬೆಯ ಕ್ಯಾಂಪಸ್‌ಗಳಲ್ಲಿ ತಲಾ 2ರಂತೆ ಒಟ್ಟು 10 ಶಿಕ್ಷಣ ಘಟಕಗಳು ಕಾರ್ಯಾಚರಿಸುತ್ತಿವೆ. ತುಂಬೆಯಲ್ಲಿ ಪ್ರಸಕ್ತ ಸಾಲಿನಿಂದ ಆರಂಭಗೊಂಡಿರುವ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನಲ್ಲಿ ಇಮೇಜಿಂಗ್ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್ ಅನೆಸ್ತೇಶಿಯಾ ಮತ್ತು ಶಸ್ತ್ರ ಚಿಕಿತ್ಸಾ (ಎಟಿ- ಒಟಿ) ಕೋರ್ಸ್ ಆರಂಭಗೊಳ್ಳಲಿದೆ. ಈಗಾಗಲೇ ಕಾಲೇಜಿಗೆ ವಿದ್ಯಾರ್ಥಿಗಳ ದಾಖಲಾತಿ ನಡೆಯುತ್ತಿದ್ದು, ನೂತನ ಪ್ರಾಂಶುಪಾಲರಾಗಿ ಪ್ರೊ. ಶಿವಶಂಕರ್ ಅಧಿಕಾರ ವಹಿಸಲಿದ್ದಾರೆ ಎಂದರು. 

ನ.21-22: “ರುಬಿಕಾನ್ ೨೦೨೪” ಸಮ್ಮೇಳನ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ 40 ವರ್ಷಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ 27ನೆ ವಾರ್ಷಿಕ ರಾಷ್ಟ್ರೀಯ ಹೋಮಿಯೋಪಥಿ ಸಮ್ಮೇಳನ ‘ರುಬಿಕಾನ್ 2024’ ನ. 21 ಮತ್ತು 22ರಂದು ಕಂಕನಾಡಿಯ ಫಾ. ಮುಲ್ಲರ್ ಕನ್ವೆನ್ಶನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ. ನ. 21ರಂದು ಬೆಳಗ್ಗೆ 9:30ಕ್ಕೆ ರಾಜ್ಯ ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟನೆ ನೆರವೇರಿಸಲಿದ್ದಾರೆ. ರಾಷ್ಟ್ರೀಯ ಹೋಮಿಯೋಪಥಿ ಆಯೋಗದ ಅಧ್ಯಕ್ಷ ಡಾ.ಅನಿಲ್ ಖುರಾನಾ, ಹೋಮಿಯೋಪಥಿ ಶಿಕ್ಷಣ ಮಂಡಳಿಯ ಡಾ. ತಾರಕೇಶ್ವರ್ ಜೈನ್ ಅತಿಥಿಗಳಾಗಿ ಭಾಗವಹಿಸಲಿರುವರು.

ಸಮ್ಮೇಳನದಲ್ಲಿ 1000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಇದೇ ವೇಳೆ ಹೋಮಿಯೋಪಥಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಮಿಲನ್ 5 ಕಾರ್ಯಕ್ರಮ ನ.23ರಂದು ಆಯೋಜಿಸಲಾಗಿದೆ ಎಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ನಿಯೋಜಿತ ನಿರ್ದೇಶಕ ಹಾಗೂ ಆಡಳಿತಾಧಿಕಾರಿ ವಂ. ಪೌಸ್ತಿನ್ ಎಲ್. ಲೋಬೋ ವಿವರ ನೀಡಿದರು. 

ಹೋಮಿಯೋಪಥಿ ಮಹಾವಿದ್ಯಾಲಯ 1985ರಿಂದ ಕಾರ್ಯಾಚರಿಸುತ್ತಿದ್ದು, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯಿಂದ ಗುರುತಿಸಲ್ಪಟ್ಟಿದೆ. ಹೋಮಿಯೋಪಥಿ ರಾಷ್ಟ್ರೀಯ ಪರಿಷತ್ತು ಮತ್ತು ಆಯುಷ್ ಇಲಾಖೆಯಿಂದ ಮಾನ್ಯತೆ ಪಡೆದಿದ್ದು, 75 ಹಾಸಿಗೆಗಳ ಒಳರೋಗಿ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಚಿಕಿತ್ಸೆತೆಯನ್ನು ಒದಗಿಸಲಾಗುತ್ತಿದೆ ಎಂದರು.   

ನವೆಂಬರ್ 15ರಂದು ಬೆಳ್ಳಿ ಹಬ್ಬ ಸಂಭ್ರಮ

ಕಂಕನಾಡಿಯ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ 25 ವರ್ಷಗಳ ಶ್ರೇಷ್ಟತೆಯ ಕಾರ್ಯಕ್ರಮ ನ.15ರಂದು ಸಂಜೆ 5:30ಕ್ಕೆ ಸಂಸ್ಥೆಯ ಕನ್ವೆನ್ಶನ್ ಸೆಂಟರ್‌ನಲ್ಲಿ ನಡೆಯಲಿದೆ. ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್, ಮೈಸೂರು ಡಯಾಸಿಸ್ನ ಅಪೊಸ್ಟೊಲಿಕ್ ಆಡಳಿತಾಧಿಕಾರಿ ರೆ.ಫಾ. ಡಾ. ಬೆರ್ನಾಡ್ ಮೊರಾಸ್, ಫಾದರ್ ಮುಲ್ಲರ್ ಚಾರಿಟೆಲ್ ಸಂಸ್ಥೆಯ ಮಾಜಿ ನಿರ್ದೇಶಕ ರೆ.ಡಾ. ಅಲೋಶಿಯಸ್ ಪೌಲ್ ಡಿಸೋಜ ಭಾಗವಹಿಸಲಿದ್ದು, ಮಂಗಳೂರು ಬಿಷಪ್ ರೆ.ಡಾ.ಪೀಟರ್ ಪೌಲ್ ಸಲ್ದಾನ ಅಧ್ಯಕ್ಷತೆ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ವೈದ್ಯಕೀಯ ಕಾಲೇಜಿನ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ‘ಟಾರ್ಚ್ ಬೈ ಏಂಜಲ್ಸ್’ ಎಂಬ ಕೃತಿ ಬಿಡುಗಡೆಗೊಳ್ಳಲಿದ್ದು, ಇದೇ ವೇಳೆ ಸಂಸ್ಥೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸಿದ ವೈದ್ಯರು ಹಾಗೂ ಇತರ ಸಿಬ್ಬಂದಿ ವರ್ಗದವರಿಗೆ ಸನ್ಮಾನ ನೆರವೇರಲಿದೆ. ಸಂಸ್ಥೆಯಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಧರ್ಮಗುರುಗಳನ್ನು ಗೌರವಿಸಲಾಗುವುದು ಎಂದು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ರೆ.ಫಾ. ಅಜಿತ್ ಮಿನೇಜಸ್ ತಿಳಿಸಿದರು. 

ತುಂಬೆ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ಉದ್ಘಾಟನೆ

ತುಂಬೆಯ ಫಾದರ್ ಮುಲ್ಲರ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್ನಲ್ಲಿ ಆರಂಭಗೊಂಡಿರುವ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜು ನ.18ರಂದು ಉದ್ಘಾಟನೆಗೊಳ್ಳಲಿದೆ. ಇಮೇಜಿಂಗ್ ಟೆಕ್ನಾಲಜಿ ಹಾಗೂ ಬಿಎಸ್ಸಿ ಇನ್ ಎಟಿ ಮತ್ತು ಒಟಿ ಕೋರ್ಸ್ಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದ್ದು, ನ.30ರವರೆಗೆ ಆಸಕ್ತ ಅರ್ಹ ವಿದ್ಯಾರ್ಥಿಗಳಿಗೆ ಸೇರ್ಪಡೆಗೆ ಅವಕಾಶವಿದೆ ಎಂದು ಕಾಲೇಜಿನ ನೂತನ ಪ್ರಾಂಶುಪಾಲ ಪ್ರೊ. ಶಿವಶಂಕರ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವಿವಿಧ ವಿಭಾಗಗಳ ಪ್ರಮುಖರಾದ ಡಾ.ಇ.ಎಸ್.ಜೆ.ಪ್ರಭು ಕಿರಣ್, ಡಾ. ವಿಲ್ಮಾ ಮೀರಾ ಡಿಸೋಜ, ಡಾ.ಗಿರೀಶ್ ನಾವಡ, ಡಾ. ರಂಜನ್ ಸಿ. ಬ್ರಿಟ್ಟೋ, ಡಾ.ಅನುಷಾ ಜಿ. ಸನಿಲ್, ಫಾ.ಅಜಿತ್ ಪಿ. ಲೋಬೋ, ಫಾ.ಜಾರ್ಜ್ ಸಿಕ್ವೇರಾ, ಫಾ. ಡೊನಾಲ್ಡ್, ಡಾ. ಆ್ಯಂಟನಿ, ಡಾ.ವೆಂಕಟೇಶ್, ಡಾ. ಉದಯ ಕುಮಾರ್, ಡಾ.ಧನ್ಯಾ ದೇವಸ್ಯ, ಪ್ರೊ.ಸಿಂತಿಯಾ, ಪ್ರೊ. ಚರಿಷ್ಮಾ, ಭ. ನ್ಯಾನ್ಸಿ, ಫೋರ್ವಿಂಡ್ಸ್ನ ಇಲಿಯಾಸ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಫಾದರ್ ಮುಲ್ಲರ್ ವೈದ್ಯಕೀಯ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ಕೆಲ್ವಿನ್ ಪಾಯಸ್ ಸುದ್ದಿಗೋಷ್ಠಿಯನ್ನು ನಿರ್ವಹಿಸಿದರು.

Category
ಕರಾವಳಿ ತರಂಗಿಣಿ