ಮಂಗಳೂರು : ಕರ್ನಾಟಕ ಸುವರ್ಣ ಸಂಭ್ರಮದ ಅಂಗವಾಗಿ ನ.13 ರಂದು ಮಂಗಳೂರಿನ ಉರ್ವಾಸ್ಟೋರ್ ನಲ್ಲಿರುವ ತುಳು ಭವನದಲ್ಲಿ ದ.ಕ.ಜಿಲ್ಲಾ ಮಟ್ಟದ ಪ್ರೌಢ ಶಾಲಾ ವಿದ್ಯಾರ್ಥಿಗಳ ಚಿತ್ರಕಲಾ ಸ್ಪರ್ಧೆ ನಡೆಯಲಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕೊಂಕಣಿ ಅಕಾಡೆಮಿ, ಬ್ಯಾರಿ ಅಕಾಡೆಮಿ, ಅರೆ ಭಾಷೆ ಅಕಾಡೆಮಿ, ಕೊಡವ ಅಕಾಡೆಮಿ, ಯಕ್ಷಗಾನ ಅಕಾಡೆಮಿ ಆಶ್ರಯದಲ್ಲಿ ಮಂಗಳೂರಿನಲ್ಲಿ ಬಹುಸಂಸ್ಕೃತಿ ಉತ್ಸವ ನಡೆಯಲಿದೆ. ಈ ಪ್ರಯುಕ್ತ ಸ್ಪರ್ಧೆ ಆಯೋಜಿಸಲಾಗಿದೆ. 'ಕರಾವಳಿ ಕರ್ನಾಟಕದ ಬಹುಸಂಸ್ಕೃತಿಯ ಪರಂಪರೆ' ಎಂಬ ವಿಷಯದ ಬಗ್ಗೆ ಚಿತ್ರ ರಚನಾ ಸ್ಪರ್ಧೆ ಬೆಳಿಗ್ಗೆ 11.00 ಗಂಟೆಗೆ ನಡೆಯಲಿದೆ.
ಸ್ಪರ್ಧೆ ಆರಂಭಗೊಳ್ಳುವ ಮುನ್ನ ಸ್ಥಳದಲ್ಲಿ ಹೆಸರು ನೋಂದಣಿ ನಡೆಯಲಿದೆ.ಚಿತ್ರ ಬರೆಯುವ ಪರಿಕರಗಳನ್ನು ವಿದ್ಯಾರ್ಥಿಗಳು ತರಬೇಕು, ಡ್ರಾಯಿಂಗ್ ಶೀಟ್ ಸ್ಥಳದಲ್ಲಿ ನೀಡಲಾಗುವುದು . ಯಾವುದೇ ರೀತಿಯ ಮಾಧ್ಯಮದಲ್ಲಿಯೂ ಚಿತ್ರ ರಚನೆ ಮಾಡಬಹುದಾಗಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು, ಮಂಗಳೂರಿನಲ್ಲಿ ನಡೆಯುವ ಬಹುಸಂಸ್ಕೃತಿ ಉತ್ಸವದ ದಿನ ಬಹುಮಾನ ಪ್ರಧಾನ ಮಾಡಲಾಗುವುದು. ಶಾಲೆಯ ಮುಖ್ಯಸ್ಥರ ದೃಢೀಕರಣದೊಂದಿಗೆ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.