ಮಂಗಳೂರು: ಬಹು ನಿರೀಕ್ಷಿತ ಪಿಲಿಕುಳ "ನೇತ್ರಾವತಿ- ಫಲ್ಗುಣಿ' ಜೋಡುಕರೆ ಕಂಬಳ ಮೂಡುಶೆಡ್ಡೆ ಪಂಚಾಯತ್ ಚುನಾವಣೆ ಕಾರಣಕ್ಕೆ ಮುಂದೂಡಿಕೆಯಾಗುವ ಬಹುತೇಕ ಸಾಧ್ಯತೆಯಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಆಯೋಜಿಸಲು ಉದ್ದೇಶಿಸಲಾಗಿರುವ ಕಂಬಳವನ್ನು ಹತ್ತು ವರ್ಷಗಳ ಬಳಿಕ ಇದೀಗ ನ. 17 ಮತ್ತು 18ರಂದು ಪಿಲಿಕುಳದ ಲ್ಲಿ ಆಯೋಜಿಸಲು ಸಿದ್ಧತೆ ನಡೆಸಲಾಗಿತ್ತು. ಆದರೆ ಮೂಡುಶೆಡ್ಡೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದ್ದು, ನ.23ರಂದು ಚುನಾವಣೆ ನಡೆಯಲಿದೆ. ಇದರಿಂದಾಗಿ ಕಂಬಳ ಆಯೋಜಿಸಿದರೆ ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತಿಲ್ಲ. ಆದ್ದರಿಂದ ಈ ಬಗ್ಗೆ ಇಂದು ಜಿಲ್ಲಾಡಳಿತ, ಕಂಬಳ ಸಮಿತಿಯವರ ಸಭೆ ನಡೆಯಲಿದ್ದು, ಇದರಲ್ಲಿ ತೀರ್ಮಾನವಾಗುವ ಸಾಧ್ಯತೆಯಿದೆ. ಒಂದು ವೇಳೆ ಕಂಬಳ ಮುಂದೂಡಿಕೆಯಾದರೆ ನ.17ರಂದು ಪೂರ್ವಭಾವಿ ಕುದಿ ಕಂಬಳ ಆಯೋಜಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗಿದೆ.