ಮಂಗಳೂರು: ಮಾರುತಿ 800 ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದಿರುವ ಘಟನೆ ನಗರದ ನಗರದ ಲೇಡಿಹಿಲ್ ನಾರಾಯಣಗುರು ವೃತ್ತದ ಬಳಿಯ ಪೆಟ್ರೋಲ್ ಬಂಕ್ ನಲ್ಲಿ ನಡೆದಿದೆ. ಕಾರಿನಲ್ಲಿದ್ದ ಮೂವರು ತಕ್ಷಣವೇ ಕೆಳಕ್ಕಿಳಿದು ಪಾರಾಗಿದ್ದಾರೆ.
ಕಾರು ಬಜಪೆ ಆದ್ಯಪಾಡಿಯ ಪಾರ್ಶ್ವನಾಥ ಎಂಬುವರಿಗೆ ಸೇರಿದ್ದಾಗಿದ್ದು, ಅವರು ಪೆಟ್ರೋಲ್ ಹಾಕಿಸಲು ಲೇಡಿಹಿಲ್‌ನ ನಾರಾಯಣ ಗುರು ವೃತ್ತದ ಸಮೀಪದ ಪೆಟ್ರೋಲ್ ಬಂಕ್‌ಗೆ ಬಂದು, ಪೆಟ್ರೋಲ್ ಬಂಕ್ ಒಳಗೆ ಪ್ರವೇಶಿಸುವ ಮುನ್ನವೇ ರಸ್ತೆಯಲ್ಲೇ ಶಾರ್ಟ್‌ಸರ್ಕೀಟ್‌ನಿಂದ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.
ಸಮೀಪದಲ್ಲಿದ್ದ ಪೆಟ್ರೋಲ್ ಬಂಕ್‌ನ ಸಿಬ್ಬಂದಿ ತಮ್ಮಲ್ಲಿದ್ದ ಅಗ್ನಿಶಾಮಕ ಸಾಧನಗಳನ್ನು ಬಳಸಿ ಬೆಂಕಿಯನ್ನು ಹತೋಟಿಗೆ ತಂದಿದ್ದರು. ಅಷ್ಟರಲ್ಲೇ ಕದ್ರಿ ಅಗ್ನಿ ಶಾಮಕ ಹಾಗೂ ತುರ್ತುಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಬೆಂಕಿಯನ್ನು ಪೂರ್ತಿ ನಂದಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.