ಮಂಗಳೂರು: ಮಣಿ ಕೃಷ್ಣಸ್ವಾಮಿ ಅಕಾಡೆಮಿಯು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ರಾಗ ಸುಧಾರಸ -ಸಂಗೀತೋತ್ಸವವು ಈ ವರ್ಷ ನವೆಂಬರ್ 14ನೇ ತಾರೀಕಿನಿಂದ 25 ರ ತನಕ ದಕ್ಷಿಣ ಕನ್ನಡ, ಉಡುಪಿ, ಹಾಗೂ ಕಾಸರಗೋಡಿನ ವಿವಿಧಡೆ ನಡೆಯಲಿದೆ ಎಂದು ಮಣಿಕೃಷ್ಣಸ್ವಾಮಿ ಅಕಾಡೆಮಿಯ ಅಧ್ಯಕ್ಷರಾದ ಕ್ಯಾ. ಗಣೇಶ್ ಕಾರ್ಣಿಕ್ ತಿಳಿಸಿದರು. ಅವರು ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿ, ದಿನಾಂಕ 14 ರಂದು ಸಂಜೆ 4:30ಕ್ಕೆ ಮಂಗಳೂರು ಪುರ ಭವನದಲ್ಲಿ ಕಾರ್ತಿಕ್ ರಾವ್ ಇಡ್ಯ ಇವರ ತಂಡದಿಂದ ನಾಮ ಸಂಕೀರ್ತನೆ ನಡೆಯಲಿದ್ದು ಬಳಿಕ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು, ಶರವು ರಾಘವೇಂದ್ರ ಶಾಸ್ತ್ರಿ, ಕ್ಯಾ. ಗಣೇಶ್ ಕಾರ್ಣಿಕ್ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಕರ್ಣಾಟಕ ಬ್ಯಾಂಕ್ ನಿವೃತ್ತ ಅಧ್ಯಕ್ಷ ಅನಂತಕೃಷ್ಣ, ಕಾರ್ಪೊರೇಷನ್ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕರು ಎ ಮೋಹನ್ ರಾವ್, ಇಂಡಿಯನ್ ಓವರ್ಸೀಸ್ ಬ್ಯಾಂಕಿನ ನಿವೃತ್ತ ಆಡಳಿತ ನಿರ್ದೇಶಕ ಎಂ ನರೇಂದ್ರ ಇವರು ತಮ್ಮ ಬ್ಯಾಂಕುಗಳ ಮೂಲಕ ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳಲಾಗುವುದು ಇದೇ ಸಂದರ್ಭ ಆಕಾಶವಾಣಿಯ TOP ಶ್ರೇಣಿ ಪಡೆದ ನಾದಸ್ವರ ವಾದಕರಾದ ವಿದ್ವಾನ್ ನಾಗೇಶ್ ಎ ಬಪ್ಪನಾಡು, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಸೀತಾರಾಮ ಬಿ ತೋಳ್ಳಡಿತ್ತಾಯ ಹಾಗೂ ರಾಜೇಂದ್ರ ಶೆಟ್ಟಿ ಎಂ ಇವರನ್ನು ಸನ್ಮಾನಿಸಲಾಗುವುದು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಶ್ರೇಯ ಕೊಳತ್ತಾಯ ಹಾಗೂ ನಿರಂಜನ್ ಡಿಂಡೋಡಿ ಇವರಿಂದ ವಿಶೇಷ ಸಂಗೀತ ಕಛೇರಿ ನಡೆಯಲಿದ್ದು ಇವರಿಗೆ ವಯಲಿನ್ ನಲ್ಲಿ ಮದನ್ ಮೋಹನ್, ಮೃದಂಗದಲ್ಲಿ ಅಕ್ಷಯ್ ಆನಂದ್ ಮತ್ತು ಘಟಂನಲ್ಲಿ ಸ್ಕಂದ ಮಂಜುನಾಥ್ ಸಹಕರಿಸಲಿರುವರು ಎಂದರು.