ಮಂಗಳೂರು: ತಾಲೂಕಿನ ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಲೆ ಮೇಲ್ಮನೆಯಲ್ಲಿರುವ, ಸದ್ಯ ಶಿಥಿಲಗೊಂಡಿದೆ ಎಂದು, ಘನ ವಾಹನ ಸಂಚಾರ ನಿಷೇಧಿಸಲ್ಪಟ್ಟಿರುವ ಉಳಾಯಿಬೆಟ್ಟುವಿನ ಕಿರು ಸೇತುವೆಗೆ ಪರ್ಯಾಯವಾಗಿ ಅಲ್ಲೇ ಪಕ್ಕದಲ್ಲಿ ತಾತ್ಕಾಲಿಕ ಮಣ್ಣಿನ ರಸ್ತೆ ನಿರ್ಮಿಸಲು ಸಾರ್ವಜನಿಕರು ಜಿಲ್ಲಾಡಳಿತ ಬಳಿ ವಿನಂತಿಸಿದ್ದೇವೆ. ಆದರೆ ಜಿಲ್ಲಾಡಳಿತ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಉಳಾಯಿಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹರಿಕೇಶ ಶೆಟ್ಟಿ ನಡಿಗುತ್ತು ಹೇಳಿದರು. ಅವರು ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉಳಾಯಿಬೆಟ್ಟು -ಪೆರ್ಮಂಕಿ-ಮಲ್ಲೂರು -ಬಿ.ಸಿ.ರೋಡ್ ಅರ್ಕುಳ- ಅಡ್ಯಾರ್‌ಗೆ ರಾಷ್ಟ್ರೀಯ ಹೆದ್ದಾರಿ 169 ರಿಂದ ನೇರ ಸಂಪರ್ಕ ಹೊಂದಿರುವ ಈ ಕಿರುಸೇತುವೆ, ನಿಷೇಧಗೊಂಡಿರುವ ಹಿನ್ನಲೆಯಲ್ಲಿ, ಈ ಭಾಗದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಮಹಿಳೆಯರು ಮತ್ತು ವಯೋವೃದ್ಧರ ಪ್ರಯಾಣ ತೀರಾ ಕಷ್ಟದಾಯಕವಾಗಿದೆ.
ಕಿರು ಸೇತುವೆ ನಿಷೇಧದ ಬಳಿಕ ಈ ಮಾರ್ಗದಲ್ಲಿ ಸಾರ್ವಜನಿಕ ವಾಹನಗಳು (KSRTC ಬಸ್ಸುಗಳು ಮತ್ತು ಖಾಸಾಗಿ ಶಾಲಾ ಕಾಲೇಜು ಬಸ್ಸುಗಳು)ಸ್ಥಗಿತಗೊಂಡಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಕಿರು ಸೇತುವೆಗೆ ಪರ್ಯಾಯ ಮಣ್ಣಿನ ರಸ್ತೆ ನಿರ್ಮಿಸುವ ಸಲುವಾಗಿ ಜಿಲ್ಲಾಡಳಿತಕ್ಕೆ ಮೂರು ಬಾರಿ ಮನವಿ ಸಲ್ಲಿಸಲಾಗಿದೆ. ಜೊತೆಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯ ವರೊಂದಿಗೆ ಖುದ್ದಾಗಿ ಸಮಸ್ಯೆಯ ಒಳಹೊರವುವನ್ನು ವಿವರಿಸಲಾಗಿತ್ತು. ಆದರೆ ಈವರೆಗೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಯಾವುದೇ ಉತ್ತರ ಬಂದಿರುವುದಿಲ್ಲ. ಹಾಗಾಗಿ ಸ್ಥಳೀಯ ನಾಗರೀಕರು, ಶಾಲಾ ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಹಾಗೂ ಇತರ ಎಲ್ಲರೂ ಸೇರಿಕೊಂಡು ನವೆಂಬರ್ 13ರಂದು ರಾಷ್ಟ್ರೀಯ ಹೆದ್ದಾರಿ 169ರ ಪರಾರಿಯಲ್ಲಿ "ಸಾರ್ವಜನಿಕ ಪ್ರತಿಭಟನೆ" ನಡೆಸಲು ಉದ್ದೇಶಿಸಿದ್ದೇವೆ. ಈ ಪ್ರತಿಭಟನೆಗೆ ಸಾರ್ವಜನಿಕರು, ಎಲ್ಲಾ ಸಂಘ ಸಂಸ್ಥೆಗಳು ಪೂರ್ಣವಾಗಿ ಈಗಾಗಲೇ ಬೆಂಬಲ ವ್ಯಕ್ತಪಡಿಸಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಇಸ್ಮಾಯಿಲ್, ಮಹಮ್ಮದ್ ಶರೀಪ್, ವಿಶ್ವನಾಥ್ ಶೆಟ್ಟಿ, ದಿನೇಶ್ ತಲ್ಲಿಮಾರ್, ದಿನೇಶ್ ಕುಮಾರ್, ದಿನೇಶ್ ಪೆರ್ಮಂಕಿ ಉಪಸ್ಥಿತರಿದ್ದರು.