ಮಂಗಳೂರು : 'ಯಕ್ಷಾಂಗಣ ಮಂಗಳೂರು' ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲ್ಪಡುವ ಹನ್ನೆರಡನೇ ವರ್ಷದ ನುಡಿಹಬ್ಬ 'ಯಕ್ಷಗಾನ ತಾಳಮದ್ದಳೆ ಸಪ್ತಾಹ 2024' ದ್ವಾದಶ ಸರಣಿಯು ಇದೇ 2024 ನವೆಂಬರ್ 11 ರಿಂದ 17ರ ವರೆಗೆ ಕದ್ರಿ ಶ್ರೀ ಮಂಜುನಾಥ ದೇವಾಲಯದ ರಾಜಾಂಗಣದಲ್ಲಿ ಜರಗಲಿದೆ. 'ಸಂಘಟನಾ ಪರ್ವ' ಎಂಬ ಹೆಸರಿನಲ್ಲಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ್ ರೈ ಕುಕ್ಕುವಳ್ಳಿ ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನವೆಂಬರ್ 11 ರಿಂದ ಕ್ರಮವಾಗಿ ಹವ್ಯಾಸಿ ಬಳಗ ಕದ್ರಿ (ರಾಜಾ ದಂಡಕ), ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ (ಕಚ ದೇವಯಾನಿ), ಶ್ರೀ ಕಾಳಿಕಾಂಬಾ ಯಕ್ಷಗಾನ ಕಲಾ ಸೇವಾ ಸಂಘ, ಉಪ್ಪಿನಂಗಡಿ (ಸೈಂಧವ ವಧೆ), ಶ್ರೀ ವಾಣೀವಿಲಾಸ ಯಕ್ಷ ಬಳಗ, ಕಟೀಲು (ತ್ರಿಶಂಕು ಸ್ವರ್ಗ), ಅಂಬುರುಹ ಯಕ್ಷಸದನ ಪ್ರತಿಷ್ಠಾನ ಬೊಟ್ಟಿಕೆರೆ (ಬಿನದ ದಾಂಪತ್ಯ): ಶ್ರೀ ಚಾಮುಂಡೇಶ್ವರೀ ಯಕ್ಷಕೂಟ ಕಣಿಯೂರು ಕನ್ಯಾನ (ಸುದರ್ಶನೋಪಖ್ಯಾನ); ಕರ್ನಾಟಕ ಯಕ್ಷಭಾರತಿ ಪುತ್ತೂರು (ಸತೀ ಶಕುಂತಲೆ) ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಕಾರದಲ್ಲಿ 'ರೆಂಜೆ ಬನೊತ ಲೆಕೈಸಿರಿ' ಹೀಗೆ ವಿನೂತನ ಪ್ರಸಂಗಗಳು ಪ್ರಸ್ತುತಿಗೊಳ್ಳಲಿವೆ.
ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ – ಗೌರವ ಪ್ರಶಸ್ತಿ
ಯಕ್ಷಾಂಗಣದ ಹನ್ನೆರಡನೇ ವರ್ಷದ ತಾಳಮದ್ದಳೆ ಸಪ್ತಾಹ ಉದ್ಘಾಟನಾ ಸಮಾರಂಭವು ನವೆಂಬರ್ 11 ರಂದು ಸಾಯಂಕಾಲ ಗಂ. 4.30 ಕ್ಕೆ ಜರಗಲಿದ್ದು ಗೌರವಾಧ್ಯಕ್ಷ ಡಾ| ಎ.ಜೆ. ಶೆಟ್ಟಿ, ಅಧ್ಯಕ್ಷತೆ ವಹಿಸುವರು. ಮುಂಬಯಿ ಉದ್ಯಮಿ ಕೆ.ಪಿ.ರೈ ಕುತ್ತಿಕ್ಕಾರು ಸಪ್ತಾಹವನ್ನು ಉದ್ಘಾಟಿಸುವರು. ಇದೇ ಸಂದರ್ಭ ದ.ಕ. ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಹಾಗೂ ಕಲ್ಕೂರಾ ಪ್ರತಿಷ್ಠಾನದ ಸಂಸ್ಥಾಪಕ ಎಸ್. ಪ್ರದೀಪ ಕುಮಾರ ಕಲ್ಕೂರಾ ಅವರಿಗೆ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ನೀಡಲಾಗುವುದು. ಮಾಜಿ ಸಚಿವ ಜೆ. ಕೃಷ್ಣ ಪಾಲೇಮಾರ್ ಪ್ರಶಸ್ತಿ ಪ್ರದಾನ ಮಾಡುವರು. ಬಹುಶ್ರುತ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆಗೈಯಲಿದ್ದು, ಡಾ. ಹರಿಕೃಷ್ಣ ಪುನರೂರು, ಡಾ. ಮಂಜುನಾಥ ಎಸ್ ರೇವಣ್ಯರ್, ವಿ. ಕರುಣಾಕರ, ಐ. ಸುಬ್ಬಯ್ಯ ರೈ, ವೇಣುಗೋಪಾಲ್ ಶೆಟ್ಟಿ ಥಾಣೆ, ಜಿತೇಂದ್ರ ಕೊಟ್ಟಾರಿ, ಅರುಣ ಪ್ರಭ ಕೆ.ಎಸ್., ಸಿ.ಎಸ್. ಭಂಡಾರಿ, ಪ್ರವೀಣ್ ಮುಖ್ಯ ಅತಿಥಿಗಳಾಗಿರಲಿದ್ದಾರೆ ಎಂದರು.
ನವೆಂಬರ್ 17 ರಂದು ಜರಗುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳೆ ಮೊಕೇಸರ, ಉದ್ಯಮಿ ಕೆ.ಕೆ. ಶೆಟ್ಟಿ ಅಹ್ಮದ್‌ನಗರ ವಹಿಸುವರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಹವ್ಯಾಸಿ ಭಾಗವತ ಹಾಗೂ ಪ್ರಸಂಗಕರ್ತ ಕೆ.ಎಸ್. ಮಂಜುನಾಥ ಶೇರೆಗಾರ ಹರಿಹರಪುರ ಅವರಿಗೆ 2024ನೇ ಸಾಲಿನ 'ಯಕ್ಷಾಂಗಣ
ಗೌರವ ಪ್ರಶಸ್ತಿ' ಪ್ರದಾನ ಮಾಡುವರು. ಕೆ.ಪಿ. ಸುಚರಿತ ಶೆಟ್ಟಿ, ಪದ್ಮರಾಜ್ ಆರ್. ಪೂಜಾರಿ, ಚಿತ್ತರಂಜನ್ ಬೋಳಾರ, ಸುಮನಾ ಘಾಟೆ, ಶಕೀಲಾ ಕಾವ ಅತಿಥಿಗಳಾಗಿರುವರು.
ಸಂಸ್ಕರಣೆ - ಸಮ್ಮಾನ
ಸಪ್ತಾಹದ ಎಲ್ಲಾ ದಿನಗಳಲ್ಲಿ ಯಕ್ಷಗಾನಕ್ಕಾಗಿ ದುಡಿದ ಹಿರಿಯ ಚೇತನಗಳು ಕೀರ್ತಿಶೇಷ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ವಿದ್ವಾನ್ ಕೆ. ಕಾಂತ ರೈ ಮೂಡಬಿದಿರೆ, ಕುಂಬಳಿ ಶ್ರೀಧರ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಎ.ಕೆ. ನಾರಾಯಣ ಶೆಟ್ಟಿ, ಮತ್ತು ಎ.ಕೆ. ಮಹಾಬಲ ಶೆಟ್ಟಿ ಫರಂಗಿಪೇಟೆ ಇವರ ಸಂಸ್ಮರಣೆ ನಡೆಯಲಿದೆ. ಅಲ್ಲದೆ ರಾಜ್ಯ ಪ್ರಶಸ್ತಿ ಪುರಸ್ಕೃತ ಪ್ರಸಿದ್ಧ ಯಕ್ಷಗಾನ ಕಲಾವಿದ ಅರುವ ಕೊರಗಪ್ಪ ಶೆಟ್ಟಿ ಅವರಿಗೆ ದಿ। ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಪ್ರಶಸ್ತಿ ಹಾಗೂ ಯಕ್ಷಾಂಗಣದ ಹಿರಿಯ ಸದಸ್ಯರಾದ ವಾಸುದೇವ ಆರ್. ಕೊಟ್ಟಾರಿ ಮತ್ತು ವಕ್ವಾಡಿ ಶೇಖರ ಶೆಟ್ಟಿ ಅವರಿಗೆ ಸನ್ಮಾನ ಗೌರವಗಳನ್ನು ನೀಡಲಾಗುವುದು ಎಂದರು.
ವಿಚಾರಗೋಷ್ಠಿ ಕೃತಿ ಬಿಡುಗಡೆ
ಸಪ್ತಾಹದ ಕೊನೆಯಲ್ಲಿ ದಿನಾಂಕ 17 ಆದಿತ್ಯವಾರ ಪೂರ್ವಾಹ್ನ ಗಂ. 10.30 ಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದೊಂದಿಗೆ 'ತುಳು ಯಕ್ಷಗಾನ ವಿಚಾರಗೋಷ್ಠಿ : ತುಳು ಆಟೊ ಪ್ರಸಂಗ ಬೊಕ್ಕ ಪ್ರಯೋಗ' ಏರ್ಪಡಿಸಲಾಗಿದೆ. ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಗೋಷ್ಠಿಯನ್ನು ಉದ್ಘಾಟಿಸುವರು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ತಾರಾನಾಥ ವರ್ಕಾಡಿ (ತುಳುಟು ಪುರಾಣ ಪ್ರಸಂಗೊಲು) ಹಾಗೂ ಹರೀಶ್ ಶೆಟ್ಟಿ ಸೂಡ (ತುಳು ಜಾನಪದ ಪ್ರಸಂಗೊ ಬೊಕ್ಕ ಕಲ್ಪ ಕತೆಕುಲು) ಪ್ರಬಂಧ ಮಂಡನೆ ಮಾಡುವರು. ಇದೇ ಸಂದರ್ಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರ ನೂತನ ಕೃತಿ 'ಸೀಯನ' ಚೀಪೆ-ಕೋಪದ ಪಾಕ ಪದೊಕು – ತುಳು ಕವಿತಾ ಸಂಕಲನವನ್ನು ಹಿರಿಯ ಸಾಹಿತಿ ಮತ್ತು ಸಂಶೋಧಕ ಪ್ರೊ| ಎ.ವಿ. ನಾವಡ ಬಿಡುಗಡೆಗೊಳಿಸುವರು. ಗಾಯಕ ತೋನ್ಸೆ ಪುಷ್ಕಳ ಕುಮಾರ್ ಮತ್ತು ಸಂಗಡಿಗರು 'ಸೀಯನ ಪದರಂಗಿತೊ' ನಡೆಸಿಕೊಡುವರು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ತೋನ್ಸೆ ಪುಷ್ಕಳ ಕುಮಾರ್ ಪ್ರಧಾನ ಕಾರ್ಯದರ್ಶಿ, ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಉಪಾಧ್ಯಕ್ಷ, ಕೆ. ರವೀಂದ್ರ ರೈ ಕಲ್ಲಿಮಾರ್, ನಿವೇದಿತಾ ಎನ್. ಶೆಟ್ಟಿ ಸಂಚಾಲಕರು, ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.