ಮಂಗಳೂರು: “ನವೆಂಬರ್ 7,8 ಮತ್ತು 9ರಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ ಕ್ಯಾಂಪಸ್ ನಲ್ಲಿ ಸಿನರ್ಜಿಯಾ-2024 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 275ಕ್ಕೂ ಹೆಚ್ಚು ಸರಕಾರಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಂದ 10000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮವು ಯುವ ಪ್ರತಿಭೆಗಳಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಉದ್ಯಮಶೀಲತೆಯಾದ್ಯಂತ ಅತ್ಯಾಧುನಿಕ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ವೇದಿಕೆ ಒದಗಿಸಲಿದೆ“ ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಪ್ರಾಂಶುಪಾಲ ಡಾ.ಎಸ್.ಎಸ್.ಇಂಜಗನೇರಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.
”ಸತತವಾಗಿ 10 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ರಾಷ್ಟ್ರೀಯ ಮಟ್ಟದ ಕಾರ್ಯಕ್ರಮ ಇದಾಗಿದೆ.ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ ಕಾರ್ಯಕ್ರಮ ವಿನೂತನವಾಗಿದ್ದು ಮಕ್ಕಳು ತಯಾರಿ ಮಾಡಿರುವ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಗಿದೆ. ಇದು ಮಕ್ಕಳಿಗೆ ಇಂಜಿನಿಯರಿಂಗ್ ಕಲಿಯಲು ಪ್ರೇರಣೆ ನೀಡಲಿದೆ.
ನವೆಂಬರ್ 9ರಂದು ನಡೆಯುವ ಏರ್ ಶೋಗೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ. ಕನ್ಸರ್ಟ್, ಕಾರ್ಯಾಗಾರ, ಹ್ಯಾಕತಾನ್ಸ್, ಫುಡ್ ಫಿಯೆಸ್ಟ ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಂಫಸಿಸ್ ಫೌಂಡೇಶನ್ ಇದರ ಸಹಭಾಗಿತ್ವ ಪಡೆದಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಟಿಯಲ್ಲಿ ಕಾಲೇಜಿನ ಉಪ ಪ್ರಾಂಶುಪಾಲ ಸುಧೀರ್ ಶೆಟ್ಟಿ, ಪ್ರಶಾಂತ್ ರಾವ್, ಸ್ಟೂಡೆಂಟ್ ಇನ್ ಚಾರ್ಜ್ ತೇಜಸ್ ನಾಯಕ್, ಜೀವಿತಾ, ಅಮೃತ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.