ಮಂಗಳೂರು : ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (M.I.O) ಆಸ್ಪತ್ರೆಯು 'M.I.O ಕ್ಯಾನ್ಸರ್ ಸ್ಟ್ರೀನರ್ ಆ್ಯಪ್' ಅನ್ನು ಬಿಡುಗಡೆ ಮಾಡಿದೆ.
ಮಂಗಳೂರಿನ ದೀಪಾ ಕಂಫರ್ಟ್ಸ್ ಆವರಣದ ಶಹನಾಯಿ ಹಾಲ್ನಲ್ಲಿ ನವೆಂಬರ್ 28ರಂದು ಬೆಳಿಗ್ಗೆ 10:30ಕ್ಕೆ ಈ ಆ್ಯಪ್ನ ಅಧಿಕೃತ ಬಿಡುಗಡೆ ಸಮಾರಂಭ ನಡೆಯಿತು. ಅನಿವಾಸಿ ಭಾರತೀಯ ಉದ್ಯಮಿ ಹಾಗೂ ಸಮಾಜಸೇವಕ ಶ್ರೀ ಮೈಕೆಲ್ ಡಿ'ಸೋಜಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಪೊಳಲಿಯ ಶ್ರೀ ರಾಮಕೃಷ್ಣ ತಪೋವನದ ಅಧ್ಯಕ್ಷರಾದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಶ್ರೀ ಐವನ್ ಡಿ'ಸೋಜಾ, ದೈಜಿವರ್ಲ್ಡ್ ಮೀಡಿಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಾಲ್ಟರ್ ನಂದಳಿಕೆ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ವೈ. ಭರತ್ ಶೆಟ್ಟಿ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.
ಬದಲಾಗುತ್ತಿರುವ ಜೀವನಶೈಲಿ, ತಂಬಾಕು ಮತ್ತು ಮದ್ಯಪಾನದ ಬಳಕೆ, ವಯೋವೃದ್ಧಿ ಹಾಗೂ ಪರಿಸರದ ಪ್ರಭಾವಗಳಿಂದಾಗಿ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಚಿಕಿತ್ಸಾ ವಿಧಾನಗಳು ಮುಂದುವರಿದಿದ್ದರೂ, ರೋಗವನ್ನು ಆರಂಭದಲ್ಲಿಯೇ ಪತ್ತೆಹಚ್ಚುವುದು ಚಿಕಿತ್ಸೆಯ ಯಶಸ್ಸು ಮತ್ತು ಬದುಕುಳಿಯುವಿಕೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.
ಬಳಕೆದಾರರ ವಯಸ್ಸು, ಕುಟುಂಬದಲ್ಲಿನ ಕ್ಯಾನ್ಸರ್ ಇತಿಹಾಸ, ತಂಬಾಕು ಮತ್ತು ಮದ್ಯ ಸೇವನೆ, ಬೊಜ್ಜು, ಜೀವನಶೈಲಿ ಅಂಶಗಳು ಹಾಗೂ ದೈಹಿಕ ಲಕ್ಷಣಗಳ ಆಧಾರದ ಮೇಲೆ ಈ ಆ್ಯಪ್ ಮೌಲ್ಯಮಾಪನ ನಡೆಸುತ್ತದೆ. ಮಾಹಿತಿಯ ಆಧಾರದ ಮೇಲೆ ವ್ಯಕ್ತಿಗಳನ್ನು ಸಾಮಾನ್ಯ ಅಪಾಯ, ಮಧ್ಯಂತರ ಅಪಾಯ, ಮಧ್ಯಮ ಅಪಾಯ ಮತ್ತು ಹೆಚ್ಚಿನ ಅಪಾಯ ಎಂಬ ನಾಲ್ಕು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಪ್ರತಿ ವರ್ಗಕ್ಕೆ ತಕ್ಕಂತೆ ಆರೋಗ್ಯ ಜಾಗೃತಿ, ಲಕ್ಷಣಗಳ ನಿಗಾ, ಸ್ಕ್ರೀನಿಂಗ್ ಪರೀಕ್ಷೆಗಳು ಮತ್ತು ವೈದ್ಯಕೀಯ ಸಲಹೆ ಪಡೆಯುವ ಮಾರ್ಗದರ್ಶನವನ್ನು ಇದು ನೀಡುತ್ತದೆ.
ಬಾಯಿಯ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಗರ್ಭಕಂಠದ ಕ್ಯಾನ್ಸರ್, ದೊಡ್ಡ ಕರುಳಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್, ಗರ್ಭಾಶಯದ ಒಳಪದರದ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್ ಹಾಗೂ ಜಠರದ ಕ್ಯಾನ್ಸರ್ ಸೇರಿದಂತೆ ಭಾರತೀಯರಲ್ಲಿ ಕಂಡುಬರುವ ಪ್ರಮುಖ ಕ್ಯಾನ್ಸರ್ಗಳನ್ನು ಈ ಆ್ಯಪ್ ಒಳಗೊಂಡಿದೆ. ಸಾಮಾನ್ಯ ಬಳಕೆದಾರರ ಜೊತೆಗೆ ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು (ANMs) ಮತ್ತು ಪ್ರಾಥಮಿಕ ಆರೋಗ್ಯ ಸಿಬ್ಬಂದಿಗೂ ಗ್ರಾಮೀಣ ಹಾಗೂ ನಗರ ಭಾಗಗಳಲ್ಲಿ ಅಪಾಯ ಗುರುತಿಸಲು ಮತ್ತು ಮಾರ್ಗದರ್ಶನ ನೀಡಲು ಈ ಆ್ಯಪ್ ನೆರವಾಗಲಿದೆ.
ಈ ಕುರಿತು ಮಾತನಾಡಿದ M.I.O ನಿರ್ದೇಶಕ ಡಾ. ಸುರೇಶ್ ರಾವ್, ಕ್ಯಾನ್ಸರ್ ವಿರುದ್ಧ ಹೋರಾಡಲು ಆಧುನಿಕ ಚಿಕಿತ್ಸೆಯ ಜೊತೆಗೆ ಸಾರ್ವಜನಿಕ ಜಾಗೃತಿ, ಆರಂಭಿಕ ಲಕ್ಷಣಗಳ ಗುರುತಿಸುವಿಕೆ ಮತ್ತು ತಂತ್ರಜ್ಞಾನದ ಜವಾಬ್ದಾರಿಯುತ ಬಳಕೆ ಅಗತ್ಯವಾಗಿದೆ. ವೈದ್ಯಕೀಯ ಪರಿಣತಿ ಮತ್ತು ಡಿಜಿಟಲ್ ತಂತ್ರಜ್ಞಾನವನ್ನು ಒಗ್ಗೂಡಿಸುವ ಈ ಆ್ಯಪ್ ಜನರಿಗೆ ಆರಂಭಿಕ ಎಚ್ಚರಿಕೆ ನೀಡುವ ಮಹತ್ವದ ಹೆಜ್ಜೆಯಾಗಿದೆ ಎಂದು ತಿಳಿಸಿದರು.
ಇದು ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಲ್ಲ; ಬದಲಿಗೆ ಅಪಾಯದ ಅರಿವು ಮೂಡಿಸುವ ಮತ್ತು ವೈದ್ಯಕೀಯ ಸಲಹೆಗೆ ಪ್ರೇರೇಪಿಸುವ ಸಾಧನ ಮಾತ್ರ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸಾಮಾನ್ಯ ಅಪಾಯ ಬಂದರೂ ಕ್ಯಾನ್ಸರ್ ಇಲ್ಲವೆಂದು ಖಚಿತಪಡಿಸಲಾಗುವುದಿಲ್ಲ ಮತ್ತು ಹೆಚ್ಚಿನ ಅಪಾಯ ಬಂದರೂ ಕ್ಯಾನ್ಸರ್ ಇದೆಯೆಂದೇ ಅರ್ಥವಲ್ಲ. ರೋಗವನ್ನು ಖಚಿತಪಡಿಸಲು ಮತ್ತು ಹಂತವನ್ನು ನಿರ್ಧರಿಸಲು ಆಸ್ಪತ್ರೆಯಲ್ಲಿ ಅರ್ಹ ವೈದ್ಯರಿಂದ ತಪಾಸಣೆ ಅಗತ್ಯವಾಗಿದೆ. ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಲ್ಲಿ (https://play.google.com/store/apps/details?id=com.cancer.cancerscreen&pcampaignid=web_share) ಡೌನ್ಲೋಡ್ ಮಾಡಿಕೊಳ್ಳಬಹುದು.