ಮಂಗಳೂರು: ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಕರಾವಳಿ ಕರ್ನಾಟಕ ಹಾಗೂ ಉತ್ತರ ಕೇರಳದಲ್ಲೇ ಮೊದಲ ಬಾರಿಗೆ ಅತ್ಯಾಧುನಿಕ 'ರೋಬೋಟಿಕ್ ಸೆಂಟ್ರಲ್ ಪ್ಯಾಂಕ್ರಿಯಾಟೆಕ್ಟಮಿ' ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.
22 ವರ್ಷದ ಯುವತಿಯೊಬ್ಬರ ಮೇದೋಜೀರಕ ಗ್ರಂಥಿಯ (ಪ್ಯಾಂಕ್ರಿಯಾಸ್) ಮಧ್ಯಭಾಗದಲ್ಲಿ ಕಂಡುಬಂದಿದ್ದ ಗಡ್ಡೆಯನ್ನು ಈ ಸಂಕೀರ್ಣ ಶಸ್ತ್ರಚಿಕಿತ್ಸೆಯ ಮೂಲಕ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಡಾ. ರೋಹನ್ ಶೆಟ್ಟಿ ಮತ್ತು ಡಾ. ಅಶ್ವಿನ್ ಆಳ್ವ ಅವರ ತಂಡವು ಅರಿವಳಿಕೆ ತಜ್ಞ ಡಾ. ಹರೀಶ್ ಕಾರಂತ ಅವರ ಸಹಕಾರದೊಂದಿಗೆ ಈ ಚಿಕಿತ್ಸೆಯನ್ನು ಯಶಸ್ವಿಗೊಳಿಸಿದೆ.
ಈ ರೋಬೋಟಿಕ್ ವಿಧಾನದಿಂದಾಗಿ ಗಡ್ಡೆಯನ್ನು ನಿಖರವಾಗಿ ತೆಗೆಯುವುದರ ಜೊತೆಗೆ ಮೇದೋಜೀರಕ ಗ್ರಂಥಿಯ ಬಹುಪಾಲು ಆರೋಗ್ಯಕರ ಭಾಗವನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ರೋಗಿಗೆ ಭವಿಷ್ಯದಲ್ಲಿ ಮಧುಮೇಹ ಹಾಗೂ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಅಪಾಯ ತಪ್ಪಿದಂತಾಗಿದೆ. ಶಸ್ತ್ರಚಿಕಿತ್ಸೆಯ ಬಳಿಕ ಯುವತಿಯು ಶೀಘ್ರವಾಗಿ ಚೇತರಿಸಿಕೊಂಡು ಒಂದು ವಾರದೊಳಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪ್ರಶಾಂತ್ ಮಾರ್ಲ ಕೆ. ಅವರು, "ಕಳೆದ ಒಂದು ದಶಕದಲ್ಲಿ ನಮ್ಮ ಶಸ್ತ್ರಚಿಕಿತ್ಸಾ ಗ್ಯಾಸ್ಟ್ರೋಎಂಟರಾಲಜಿ ವಿಭಾಗ ಸಾಧಿಸಿರುವ ಪ್ರಗತಿಗೆ ಈ ಯಶಸ್ಸು ಸಾಕ್ಷಿಯಾಗಿದೆ. ಆಧುನಿಕ ರೋಬೋಟಿಕ್ ತಂತ್ರಜ್ಞಾನದ ಮೂಲಕ ಸಂಕೀರ್ಣ ಗಡ್ಡೆಗಳ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ನಮ್ಮ ತಂಡದ ಪರಿಣತಿ ಮತ್ತು ನಿಖರತೆಗೆ ಹಿಡಿದ ಕನ್ನಡಿಯಾಗಿದೆ" ಎಂದು ತಿಳಿಸಿದ್ದಾರೆ.