ಮಂಗಳೂರು: ಕೊಂಕಣಿ ಕಲೆ, ಸಂಸ್ಕೃತಿ, ಸಾಹಿತ್ಯ ಮತ್ತು ಸಂಗೀತವನ್ನು ಬೆಳೆಸುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ 'ಮಾಂಡ್ ಸೊಭಾಣ್' ಸಂಸ್ಥೆಯ ತಿಂಗಳ ವೇದಿಕೆ ಸರಣಿಯು 300 ತಿಂಗಳುಗಳ (25 ವರ್ಷಗಳ) ಐತಿಹಾಸಿಕ ಮೈಲಿಗಲ್ಲನ್ನು ತಲುಪಿದೆ. ಈ ವಿಶೇಷ ಸಂಭ್ರಮದ ಅಂಗವಾಗಿ ಡಿಸೆಂಬರ್ 6, 2026ರಂದು ಸಂಜೆ 6.00 ಗಂಟೆಗೆ ಶಕ್ತಿನಗರದ ಕಲಾಂಗಣ ಮೈದಾನದಲ್ಲಿ 'ದಿ ಗ್ರೇಟ್ ಬಾಯ್ಲಾ ಇಂಟರ್ ನ್ಯಾಷನಲ್ ಶೋ' ನಡೆಯಲಿದೆ ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ತಿಳಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕ ದಿವಂಗತ ಎರಿಕ್ ಒಝೇರಿಯೋ ಅವರ ಕನಸು ಹಾಗೂ ಆಶಯದಂತೆ ತಿಂಗಳ ವೇದಿಕೆ ಸರಣಿಯು ಯಶಸ್ವಿಯಾಗಿ 25 ವರ್ಷಗಳನ್ನು ಪೂರೈಸಿದೆ. 300ನೇ ಕಾರ್ಯಕ್ರಮವನ್ನು ದುಬಾಯಿಯ ಖ್ಯಾತ ಗಿಟಾರ್ ಮಾಯೆಸ್ಟ್ರೊ ಆಲ್ವಿನ್ ಫೆರ್ನಾಂಡಿಸ್ ನಿರ್ದೇಶಿಸಲಿದ್ದು, ಶ್ರೀಲಂಕಾದ ಅಂತರರಾಷ್ಟ್ರೀಯ ಖ್ಯಾತಿಯ 'ಎಲ್ಲೋ ಬೀಟ್ಸ್' (Yellow Beats) ಸಂಗೀತ ತಂಡ ವಿಶೇಷ ಪ್ರದರ್ಶನ ನೀಡಲಿದೆ ಎಂದರು.
ಹಳೆಯ ಹಾಗೂ ಹೊಸ ಬಾಯ್ಲಾ ಹಾಡುಗಳ ಜೊತೆಗೆ 'ನಾಚ್ ಸೊಭಾಣ್' ಮತ್ತು 'ಅರ್ಬನ್ ಗ್ರೂವ್' ತಂಡಗಳಿಂದ ನೃತ್ಯ ಪ್ರದರ್ಶನವಿರಲಿದೆ. ಅಲ್ಲದೆ, ವೆಂಜ್ ಮಾಡೆಲಿಂಗ್ ಅಕಾಡೆಮಿಯ ವಿದ್ಯಾರ್ಥಿಗಳಿಂದ ಕೊಂಕಣಿ ಸಾಂಪ್ರದಾಯಿಕ ಉಡುಗೆಯ ಫ್ಯಾಷನ್ ವಾಕ್ ಮತ್ತು ನೃತ್ಯ ನಡೆಯಲಿದೆ. ಯುವಜನರು ಹಾಗೂ ನೃತ್ಯಾಸಕ್ತರಿಗಾಗಿ ಪ್ರತ್ಯೇಕ ನೃತ್ಯ ವೇದಿಕೆಯ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ಬೆಂಗಳೂರಿನ ಉದ್ಯಮಿ ಹಾಗೂ ದಾನಿ ಆಸ್ಟಿನ್ ರೋಚ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
2001ರ ಡಿಸೆಂಬರ್ 1ರಂದು ಖ್ಯಾತ ನಟ ನಾಸಿರುದ್ದೀನ್ ಶಾ ಅವರು ಕಲಾಂಗಣದ ಬಯಲು ರಂಗಮಂದಿರವನ್ನು ಲೋಕಾರ್ಪಣೆಗೊಳಿಸಿದ್ದರು. 2002ರ ಜನವರಿ 6ರಂದು ಆರಂಭವಾದ ತಿಂಗಳ ವೇದಿಕೆ ಕಾರ್ಯಕ್ರಮವು ಪ್ರತಿ ತಿಂಗಳ ಮೊದಲ ಭಾನುವಾರ ಸಂಜೆ 6.30ಕ್ಕೆ ತಪ್ಪದೇ ನಡೆಯುತ್ತಾ ಬಂದಿದೆ. ಮಳೆಗಾಲ ಹಾಗೂ ವಿಶೇಷ ಸಂದರ್ಭಗಳಲ್ಲಿ ವಿವಿಧ ವೇದಿಕೆಗಳಲ್ಲಿಯೂ ಕೊಂಕಣಿ ಕಲಾ ಪ್ರಕಾರಗಳು ಪ್ರದರ್ಶನಗೊಂಡಿವೆ. ಕಳೆದ 25 ವರ್ಷಗಳಲ್ಲಿ ಕೊಂಕಣಿ ಯಕ್ಷಗಾನ, ಗೋವಾದ ತಿಯಾತ್ರ, ಹಾಸ್ಯ ಕಾರ್ಯಕ್ರಮಗಳು, ಯುವ ಮಹೋತ್ಸವಗಳು, ವಿವಿಧ ಭಾಷಾ ಪ್ರಭೇದಗಳ ಜನಪದ ಕಲೆಗಳು ಹಾಗೂ ಜ್ಞಾನಪೀಠ ಪುರಸ್ಕೃತರು ಸೇರಿದಂತೆ ಕೊಂಕಣಿ ಸಾಹಿತಿಗಳ ಕೃತಿಗಳ ರಂಗ ಪ್ರಯೋಗಗಳು ಇಲ್ಲಿ ಮೂಡಿಬಂದಿವೆ. ಕಲಾವಿದರಿಗೆ ಸೂಕ್ತ ಗೌರವಧನ, ಪ್ರಯಾಣ, ವಸತಿ, ಊಟೋಪಚಾರ ಹಾಗೂ ಉತ್ತಮ ಧ್ವನಿ-ಬೆಳಕಿನ ವ್ಯವಸ್ಥೆಯೊಂದಿಗೆ ಮಾಂಡ್ ಸೊಭಾಣ್ ಈ ವೇದಿಕೆಯನ್ನು ಮುನ್ನಡೆಸಿಕೊಂಡು ಬಂದಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ 'ದಿ ಗ್ರೇಟ್ ಬಾಯ್ಲಾ ಇಂಟರ್ ನ್ಯಾಷನಲ್ ಶೋ' ನಿರ್ದೇಶಕ ಆಲ್ವಿನ್ ಫೆರ್ನಾಂಡಿಸ್, ಕಲಾಂಗಣ ವಿಜೆಂತ್ ರಾಯ್ ಕ್ಯಾಸ್ಟೆಲಿನೊ, ಮಾಂಡ್ ಸೊಭಾಣ್ ಸಂಘಟಕ ಸ್ಟ್ಯಾನಿ ಆಲ್ವಾರಿಸ್, ಉಪಾಧ್ಯಕ್ಷ ನವೀನ್ ಲೋಬೊ, ಕಾರ್ಯದರ್ಶಿ ರೊನಾಲ್ಡ್ ಕ್ರಾಸ್ತಾ ಹಾಗೂ ಖಜಾಂಚಿ ಎಲೋನ್ ರೊಡ್ರಿಗಸ್ ಉಪಸ್ಥಿತರಿದ್ದರು.