image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪುರಭವನದಲ್ಲಿ ಡಿ. 25ರಿಂದ ಮೂರು ದಿನ ‘ವಿಶ್ವಕೌಶಲಂ 2026’ ಕಲಾ ಮಹೋತ್ಸವ

ಪುರಭವನದಲ್ಲಿ ಡಿ. 25ರಿಂದ ಮೂರು ದಿನ ‘ವಿಶ್ವಕೌಶಲಂ 2026’ ಕಲಾ ಮಹೋತ್ಸವ

ಮಂಗಳೂರು: ಪಾರಂಪರಿಕ ಕುಲಕಸುಬುಗಳು ಹಾಗೂ ಶಿಲ್ಪಕಲೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಸೆದು ಪುನರುತ್ಥಾನಗೊಳಿಸುವ ಮಹತ್ತರ ಉದ್ದೇಶದಿಂದ ವಿಶ್ವಕರ್ಮ ಕಲಾ ಪರಿಷತ್ ವತಿಯಿಂದ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ‘ವಿಶ್ವಕೌಶಲಂ 2026’ ಎಂಬ ವಿಶಿಷ್ಟ ಕಲಾ ಮತ್ತು ತಂತ್ರಜ್ಞಾನ ಪ್ರದರ್ಶನವನ್ನು ಡಿಸೆಂಬರ್ 25, 26 ಮತ್ತು 27ರಂದು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ ಎಂದು ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿಶ್ವಕರ್ಮ ಕಲಾ ಪರಿಷತ್ತಿನ ಅಧ್ಯಕ್ಷ ಡಾ. ಎಸ್. ಪಿ. ಗುರುದಾಸ್ ಮಾಹಿತಿ ನೀಡಿದರು.

ಡಿಸೆಂಬರ್ 25ರಂದು ಅಪರಾಹ್ನ 4 ಗಂಟೆಗೆ ಪರಮಪೂಜ್ಯ ಅನಂತ ಶ್ರೀ ವಿಭೂಷಿತ ಕಾಳಹಸ್ತೀಂದ್ರ ಸರಸ್ವತಿ ಮಹಾಸ್ವಾಮಿಗಳವರ ದಿವ್ಯ ಉಪಸ್ಥಿತಿ ಹಾಗೂ ಆಶೀರ್ವಚನದೊಂದಿಗೆ ಈ ಮೂರು ದಿನಗಳ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, ಉದ್ಘಾಟನಾ ಸಮಾರಂಭಕ್ಕೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಜಯಂತ್ ಚೌಧರಿ ಅವರನ್ನು ಆಹ್ವಾನಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ವಿಶೇಷ ಆಕರ್ಷಣೆಯಾಗಿ ಅಯೋಧ್ಯೆಯ ರಾಮಲಲ್ಲಾ ವಿಗ್ರಹ ಕೆತ್ತಿದ ಖ್ಯಾತ ಶಿಲ್ಪಿ ಡಾ. ಅರುಣ್ ಯೋಗಿರಾಜ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಅಯೋಧ್ಯೆ ರಾಮಮಂದಿರದ ಪ್ರಮುಖ ಆರ್ಕಿಟೆಕ್ಟ್ ನಿಖಿಲ್ ಸೋಂಪುರ, ಅಂತಾರಾಷ್ಟ್ರೀಯ ವಿನ್ಯಾಸಕಾರ ಆದಿತ್ಯಾಚಾರಿ, ಕೋಟೇಶ್ವರದ ರಾಜಗೋಪಾಲಾಚಾರ್ಯ ಹಾಗೂ ಶಿಲ್ಪಿ ಸತೀಶಾಚಾರ್ಯ ಸೇರಿದಂತೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ದಿಗ್ಗಜರು ಭಾಗವಹಿಸಿ ತಮ್ಮ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ.

ಪುರಭವನದ ಮೂರು ಪ್ರತ್ಯೇಕ ವೇದಿಕೆಗಳಲ್ಲಿ ನಿರಂತರವಾಗಿ ವಿವಿಧ ಚಟುವಟಿಕೆಗಳು ನಡೆಯಲಿವೆ. ಒಟ್ಟು 128 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪೈಕಿ 120 ಮಳಿಗೆಗಳಲ್ಲಿ 1,000ಕ್ಕೂ ಹೆಚ್ಚು ಕುಶಲಕರ್ಮಿಗಳ ವಿಶಿಷ್ಟ ಕಲಾಕೃತಿಗಳ ಪ್ರದರ್ಶನವಿರಲಿದೆ. ಕೈಗಳಿಲ್ಲದೆ ಕಾಲಿನಲ್ಲೇ ಚಿತ್ರ ಬಿಡಿಸುವ ಕಲಾವಿದರು ಹಾಗೂ ಆಭರಣ ವಿನ್ಯಾಸ ಮತ್ತು ಸಂಸ್ಕರಣೆ ಮಾಡುವ ಮೈಸೂರಿನ ಜೆಎಸ್ಎಸ್ ಸಂಸ್ಥೆಯ ವಿಶೇಷ ಚೇತನ ವಿದ್ಯಾರ್ಥಿಗಳ ಕರಕೌಶಲ್ಯ ಇಲ್ಲಿ ಪ್ರದರ್ಶನಗೊಳ್ಳಲಿದೆ. ಕುಶಲಕರ್ಮಿಗಳಿಗೆ ನೇರ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಬಿಲ್ಡರ್‌ಗಳು, ಆರ್ಕಿಟೆಕ್ಟ್‌ಗಳು ಹಾಗೂ ಉದ್ಯಮಿಗಳನ್ನು ಆಹ್ವಾನಿಸಲಾಗಿದೆ. ಇನ್ನುಳಿದ ಮಳಿಗೆಗಳಲ್ಲಿ ಸಿಎನ್‌ಸಿ ಯಂತ್ರಗಳು, 3ಡಿ ಪ್ರಿಂಟರ್, ಲೇಸರ್ ಎಂಗ್ರೇವಿಂಗ್, ಎಆರ್ ಮತ್ತು ವಿಆರ್‌ನಂತಹ ಆಧುನಿಕ ತಂತ್ರಜ್ಞಾನಗಳ ಪ್ರದರ್ಶನ ಹಾಗೂ ಮಿನಿ ಹಾಲ್‌ನಲ್ಲಿ ಪ್ರಾತ್ಯಕ್ಷಿಕೆಗಳು ನಡೆಯಲಿವೆ.

ಪಂಚಶಿಲ್ಪ ಕ್ಷೇತ್ರಕ್ಕೆ ಯುವಜನತೆಯನ್ನು ಆಕರ್ಷಿಸಲು ಹಾಗೂ ನಿರುದ್ಯೋಗ ನಿವಾರಿಸಿ ಅವರನ್ನು ಉದ್ಯಮಿಗಳನ್ನಾಗಿ ಬೆಳೆಸಲು ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಮತ್ತು ಐಟಿಐ ವಿದ್ಯಾರ್ಥಿಗಳಿಗಾಗಿ 1 ಲಕ್ಷ ರೂಪಾಯಿ ಬಹುಮಾನ ಮೊತ್ತದ ‘ಇನ್ನೋವೇಶನ್ ಚಾಲೆಂಜ್ ಮತ್ತು ಬಿಸಿನೆಸ್ ಐಡಿಯಾ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಆಯ್ಕೆಯಾದ ಅತ್ಯುತ್ತಮ ಐಡಿಯಾಗಳಿಗೆ ಸೇಂಟ್ ಅಲೋಶಿಯಸ್ ಕಾಲೇಜಿನ ಇನ್ನೋವೇಶನ್ ಸೆಂಟರ್ ಮೂಲಕ ಆರು ತಿಂಗಳ ತರಬೇತಿ ನೀಡಿ, ಹೂಡಿಕೆದಾರರೊಂದಿಗೆ ಸಂಪರ್ಕ ಕಲ್ಪಿಸಿ ಸ್ಟಾರ್ಟ್ ಅಪ್ ಆರಂಭಿಸಲು ನೆರವು ನೀಡಲಾಗುವುದು. ಇದರೊಂದಿಗೆ ವಿದ್ಯಾರ್ಥಿಗಳಿಗೆ ಮುಖವರ್ಣಿಕೆ, ಕ್ವಿಜ್ ಸ್ಪರ್ಧೆಗಳು ಹಾಗೂ ಪಂಚ ಕ್ಷೇತ್ರಗಳಲ್ಲಿ ಸಾಧನೆಗೈದ ಹಿರಿಯ ಶಿಲ್ಪಿಗಳಿಗೆ ಜೀವಮಾನ ಸಾಧನೆ ಮತ್ತು ಶ್ರೇಷ್ಠತಾ ಪ್ರಶಸ್ತಿ ಸೇರಿದಂತೆ ಒಟ್ಟು 10 ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಸುಮಾರು 15 ರಿಂದ 20 ಸಾವಿರ ಕಲಾಸಕ್ತರು ಭಾಗವಹಿಸುವ ನಿರೀಕ್ಷೆಯಿರುವ ಈ ಕಾರ್ಯಕ್ರಮಕ್ಕೆ ಎಸ್‌ಕೆ ಫೆರಿಸ್ಸರ್ ಪ್ರೈವೇಟ್ ಲಿಮಿಟೆಡ್ ಚೇರ್ಮನ್ ಡಾ. ಜಿ. ರಾಮಕೃಷ್ಣಾಚಾರ್ ಅವರ ಗೌರವ ಮಾರ್ಗದರ್ಶನವಿದ್ದು, ವಿಶ್ವಕರ್ಮ ಸಹಕಾರ ಬ್ಯಾಂಕ್ ಹಾಗೂ ಎಸ್‌ಪಿಸಿ ಇಂಡಸ್ಟ್ರಿಯಲ್ ಕೋಆಪರೇಟಿವ್ ಸೊಸೈಟಿ ಸಹಕಾರ ನೀಡಿವೆ ಎಂದು  ತಿಳಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ  ಗಿರೀಶ್ ಆಚಾರ್ಯ ಹಾಗೂ ಉಪೇಂದ ಆಚಾರ್ಯ, ಯಶವಂತ್ ಆಚಾರ್ಯ, ಸುಂದರ್ ಆಚಾರ್ಯ ಬಿರುವ, ಶ್ರೀಮತಿ ರತ್ನಾವತಿ ಜೆ. ಬೈಕಂಪಾಡಿ ಹಾಗೂ  ಯಜ್ಞೇಶ್ ಆಚಾರ್ಯ  ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ