ಮಂಗಳೂರು: ಭಾರತೀಯ ಡಿಜಿಟಲ್ ಮೀಡಿಯಾ ಹಾಗೂ ಈವೆಂಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ನವಿ ಮುಂಬಯಿಯ 'ಇ ಪ್ಲಸ್ ಇಂಟೆಲೆಕ್ಚುವಲ್ ಮೀಡಿಯಾ' ಸಂಸ್ಥೆಯ ವತಿಯಿಂದ ಆಯೋಜಿಸಲಾಗಿರುವ 4ನೇ ಆವೃತ್ತಿಯ ರಾಷ್ಟ್ರೀಯ ಸಹಕಾರ ಬ್ಯಾಂಕ್ಗಳ ಕಾರ್ನಿವಲ್ ಮತ್ತು ಐಕಾನಿಕ್ ಲೀಡರ್ಸ್ ಪ್ರಶಸ್ತಿ ಪ್ರದಾನ ಸಮಾರಂಭವು ನವೆಂಬರ್ 27 ಮತ್ತು 28ರಂದು ಹೈದರಾಬಾದ್ನ ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯಲಿದೆ. ಈ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ 2026ನೇ ಸಾಲಿನ ಪ್ರತಿಷ್ಠಿತ ಐಕಾನಿಕ್ ಲೀಡರ್ಸ್ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
ಈ ಸಮಾರಂಭದಲ್ಲಿ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಎಸ್ಸಿಡಿಸಿಸಿ ಬ್ಯಾಂಕ್) ವರ್ಷದ ಅತ್ಯುತ್ತಮ ಬ್ಯಾಂಕ್ ಪ್ರಶಸ್ತಿಗೆ ಆಯ್ಕೆಯಾಗಿದೆ. ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಬ್ಯಾಂಕ್ ಸಾಧಿಸಿರುವ ಗಮನಾರ್ಹ ಪ್ರಗತಿ, ನಾವೀನ್ಯತೆ, ಸಾಂಸ್ಥಿಕ ಬೆಳವಣಿಗೆ, ಕಾರ್ಯಾಚರಣೆಯಲ್ಲಿನ ಶ್ರೇಷ್ಠತೆ ಹಾಗೂ ಜವಾಬ್ದಾರಿಯುತ ಬ್ಯಾಂಕಿಂಗ್ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ. ಎಸ್ಸಿಡಿಸಿಸಿ ಬ್ಯಾಂಕ್ಗೆ ಈ ಪ್ರತಿಷ್ಠಿತ ಪ್ರಶಸ್ತಿ ಪ್ರಥಮ ಬಾರಿಗೆ ದೊರೆತಿರುವುದು ವಿಶೇಷವಾಗಿದೆ.
ಇದರೊಂದಿಗೆ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಕಳೆದ 32 ವರ್ಷಗಳಿಂದ ಸಾರ್ಥಕ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ 'ಬೆಸ್ಟ್ ಚೇರ್ಮನ್' ಪ್ರಶಸ್ತಿ ಲಭಿಸಿದೆ. ಸಹಕಾರ ಬ್ಯಾಂಕಿಂಗ್ ವ್ಯವಸ್ಥೆಯ ಬಲವರ್ಧನೆಗೆ ಅವರು ನೀಡಿರುವ ಗಮನಾರ್ಹ ಕೊಡುಗೆ, ದೂರದೃಷ್ಟಿಯ ನಾಯಕತ್ವ, ಅತ್ಯುತ್ತಮ ಸಾಧನೆಗಳು ಮತ್ತು ಶ್ರೇಷ್ಠತೆಗೆ ನೀಡಿರುವ ಆದ್ಯತೆಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.
ದೇಶಾದ್ಯಂತದ ನಗರ ಸಹಕಾರ ಬ್ಯಾಂಕ್ಗಳು, ರಾಜ್ಯ ಸಹಕಾರ ಬ್ಯಾಂಕ್ಗಳು ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಳ ಪ್ರತಿನಿಧಿಗಳು ಈ ಮಹತ್ವದ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.