image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಗದೀಶ್ಚಂದ್ರ ಅಂಚನ್‌ಗೆ ‘ಕರಾವಳಿ ಸಾಧಕ ರತ್ನ’ ಪ್ರಶಸ್ತಿ

ಜಗದೀಶ್ಚಂದ್ರ ಅಂಚನ್‌ಗೆ ‘ಕರಾವಳಿ ಸಾಧಕ ರತ್ನ’ ಪ್ರಶಸ್ತಿ

ಮಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ತೋರಿದ ವಿಶಿಷ್ಟ ಸಾಧನೆ ಹಾಗೂ ಪತ್ರಿಕೋದ್ಯಮದಲ್ಲಿ ಸಲ್ಲಿಸಿದ ನಿರಂತರ ಸೇವೆಯನ್ನು ಗುರುತಿಸಿ ಕ್ರೀಡಾ ಅಂಕಣಕಾರ ಮತ್ತು ಪತ್ರಕರ್ತ ಜಗದೀಶ್ಚಂದ್ರ ಅಂಚನ್ ಅವರಿಗೆ ಪ್ರತಿಷ್ಠಿತ ‘ಕರಾವಳಿ ಸಾಧಕ ರತ್ನ’ ಪ್ರಶಸ್ತಿ ಲಭಿಸಿದೆ. ಕಾಸರಗೋಡಿನ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನವು ಈ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಗಡಿಭಾಗದ ಕ್ರೀಡಾ ಮತ್ತು ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬುವ ನಿಟ್ಟಿನಲ್ಲಿ ಈ ಗೌರವ ನೀಡಲಾಗುತ್ತಿದೆ ಎಂದು ತಿಳಿಸಿದೆ.

ಕಾಸರಗೋಡಿನಲ್ಲಿ ನಡೆಯಲಿರುವ 9ನೇ ಕೇರಳ ರಾಜ್ಯ ಕನ್ನಡ ಸಮ್ಮೇಳನ 2026 ಹಾಗೂ ಕೇರಳ-ಕರ್ನಾಟಕ ಸಾಹಿತ್ಯ ಉತ್ಸವದ ಅಂಗವಾಗಿ ಜಗದೀಶ್ ಚಂದ್ರ ಅಂಚನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ನವೆಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ಕನ್ನಡ ಸಮ್ಮೇಳನ ನಡೆಯಲಿದ್ದು, ನವೆಂಬರ್ 29ರಂದು ನಡೆಯುವ ಗಣಾರಂಭದಲ್ಲಿ ನೂಜೆ ವೆಂಕಪ್ಪ ಎಲಿಪ್ಪತ್ತಡಿ ಜೊಯಿಷ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಕ್ರೀಡಾ ಕ್ಷೇತ್ರದ ವಿವಿಧ ಆಯಾಮಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿ, ವಿಮರ್ಶಾತ್ಮಕ ಲೇಖನಗಳ ಮೂಲಕ ಓದುಗರ ಗಮನ ಸೆಳೆದಿರುವ ಜಗದೀಶ್ಚಂದ್ರ ಅಂಚನ್ ಅವರು ಕ್ರೀಡಾ ಪತ್ರಿಕೋದ್ಯಮಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅವರ ಬರವಣಿಗೆ ಮತ್ತು ವರದಿಗಾರಿಕೆಯ ಶೈಲಿಯು ಕ್ರೀಡಾಸಕ್ತರಿಗೆ ಮಾಹಿತಿ ಹಾಗೂ ಸ್ಫೂರ್ತಿಯನ್ನು ನೀಡುತ್ತಾ ಬಂದಿದೆ. ಕರಾವಳಿ ಭಾಗದ ಪ್ರತಿಭೆಗಳು ಮತ್ತು ಕ್ರೀಡಾ ಬೆಳವಣಿಗೆಗಳನ್ನು ದಾಖಲಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ಪರಿಗಣಿಸಿ ಈ ಗೌರವವನ್ನು ಅರ್ಪಿಸಲಾಗಿದೆ ಎಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗಡಿಭಾಗದ ಕನ್ನಡ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ವೇದಿಕೆಯಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಕ್ರೀಡಾ ಪತ್ರಕರ್ತರೊಬ್ಬರಿಗೆ ಸಂದಿರುವ ಈ ಪ್ರಶಸ್ತಿಯು ಕ್ರೀಡಾ ಬರವಣಿಗೆಯ ಮಹತ್ವವನ್ನು ಮತ್ತಷ್ಟು ಎತ್ತಿಹಿಡಿದಿದೆ. ಕೇರಳ ಮತ್ತು ಕರ್ನಾಟಕದ ಸಾಹಿತ್ಯ, ಸಂಸ್ಕೃತಿ ಹಾಗೂ ಕ್ರೀಡಾ ಕ್ಷೇತ್ರಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಈ ಮಹತ್ವದ ಸಮಾರಂಭದಲ್ಲಿ ಜಗದೀಶ್ಚಂದ್ರ ಅಂಚನ್ ಅವರಿಗೆ ‘ಕರಾವಳಿ ಸಾಧಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Category
ಕರಾವಳಿ ತರಂಗಿಣಿ