image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿ. ರಮಾನಾಥ ಹೆಗ್ಡೆ ಸಂಸ್ಮರಣೆ ಹಾಗೂ 'ಭಾರ್ಗವ ರಾಮ' ತಾಳಮದ್ದಳೆ

ಪಿ. ರಮಾನಾಥ ಹೆಗ್ಡೆ ಸಂಸ್ಮರಣೆ ಹಾಗೂ 'ಭಾರ್ಗವ ರಾಮ' ತಾಳಮದ್ದಳೆ

ಮಂಗಳೂರು: ಧಾರ್ಮಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಮ್ಮ ಜೀವನದಲ್ಲಿ ಶುಚಿ-ರುಚಿಯನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸ್ವರ್ಗೀಯ ಪಳ್ಳಿ ರಮಾನಾಥ ಹೆಗ್ಡೆಯವರದು ಮಾದರಿ ವ್ಯಕ್ತಿತ್ವವಾಗಿದ್ದು, ಶ್ರೀ ಮಂಗಳಾದೇವಿ ದೇವಸ್ಥಾನದ ಅಭಿವೃದ್ಧಿ ಹಾಗೂ ವಿವಿಧ ಧಾರ್ಮಿಕ-ಸಾಮಾಜಿಕ ಕಾರ್ಯಗಳ ಮೂಲಕ ಅವರು ಚಿರಸ್ಮರಣೀಯರಾಗಿದ್ದಾರೆ ಎಂದು ಶರವು ಶ್ರೀ ಶರಭೇಶ್ವರ ಮಹಾ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಪ್ರಧಾನ ಅರ್ಚಕ ಶರವು ರಾಘವೇಂದ್ರ ಶಾಸ್ತ್ರಿ ಹೇಳಿದರು.

ಯಕ್ಷಾಂಗಣ ಮಂಗಳೂರು, ಮಂಗಳೂರು ವಿವಿಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ನಗರದ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಯೋಜಿಸಿರುವ 14ನೇ ವರ್ಷದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ'ದ ಮೂರನೇ ದಿನದಂದು ದಿ. ಪಳ್ಳಿ ರಮಾನಾಥ ಹೆಗ್ಡೆಯವರ ಸಂಸ್ಮರಣಾ ಜ್ಯೋತಿ ಬೆಳಗಿಸಿ ಅವರು ಮಾತನಾಡಿದರು. ಕದ್ರಿ ಶ್ರೀಕೃಷ್ಣ ಯಕ್ಷ ಸಭಾದ ಸಂಚಾಲಕ ಸುಧಾಕರ ರಾವ್ ಪೇಜಾವರ ನುಡಿ ನಮನ ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿದ್ದ ಸೌಂದರ್ಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಸೌಂದರ್ಯ ರಮೇಶ್ ಮತ್ತು ಕಾವೂರು ಬಂಟರ ಸಂಘದ ಅಧ್ಯಕ್ಷ ಆನಂದ ಶೆಟ್ಟಿ ಮಾತನಾಡಿ, ತಾಳಮದ್ದಳೆಯೊಂದಿಗೆ ಹಿರಿಯರನ್ನು ಸ್ಮರಿಸುವ ಯಕ್ಷಾಂಗಣದ ಕಾರ್ಯವನ್ನು ಶ್ಲಾಘಿಸಿದರು. ವೇದಿಕೆಯಲ್ಲಿ ದಿ. ರಮಾನಾಥ ಹೆಗ್ಡೆಯವರ ಪತ್ನಿ ವನಿಲಾ ಆರ್. ಹೆಗ್ಡೆ ಮತ್ತು ಸುಜಾತ ವಿ. ಶೆಟ್ಟಿ ಉಪಸ್ಥಿತರಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಸುಹಾಸ್ ಆಚಾರ್ಯ ಪ್ರಾರ್ಥಿಸಿದರು. ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ವಂದಿಸಿದರು. ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಹಾಗೂ ಕಾರ್ಯದರ್ಶಿ ಲಕ್ಷ್ಮಿನಾರಾಯಣ ರೈ ಹರೇಕಳ ಅತಿಥಿಗಳನ್ನು ಗೌರವಿಸಿದರು.

ಬಳಿಕ ಸಪ್ತಾಹದ ಮೂರನೇ ಆಖ್ಯಾನವಾಗಿ ಕಟೀಲು ಶಿರಂಕಲ್ಲು ಶ್ರೀ ವಾಣಿವಿಲಾಸ ಯಕ್ಷಗಾನ ಬಳಗದ ಸಂಯೋಜನೆಯಲ್ಲಿ 'ಭಾರ್ಗವ ರಾಮ' ತಾಳಮದ್ದಳೆ ನಡೆಯಿತು. ರವಿಕೃಷ್ಣ ದಂಬೆ ಅವರ ಭಾಗವತಿಕೆಗೆ ಹರಿನಾರಾಯಣ ಬೈಪಾಡಿತ್ತಾಯ ಮತ್ತು ಅವಿನಾಶ್ ಬೈಪಾಡಿತ್ತಾಯ ಚೆಂಡೆ-ಮದ್ದಳೆಯಲ್ಲಿ ಸಾಥ್ ನೀಡಿದರು. ರಾಧಾಕೃಷ್ಣ ಕಲ್ಚಾರ್, ವಿನಯ ಆಚಾರ್ಯ ಹೊಸಬೆಟ್ಟು, ಪಶುಪತಿ ಶಾಸ್ತ್ರಿ ಶಿರಂಕಲ್ಲು ಮತ್ತು ಉಮೇಶ ನೀಲಾವರ ಅರ್ಥಧಾರಿಗಳಾಗಿ ಪಾಲ್ಗೊಂಡಿದ್ದರು.

 

Category
ಕರಾವಳಿ ತರಂಗಿಣಿ