image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನಾಚರಣೆ: ವಿಶೇಷ ಅಂಚೆ ಚೀಟಿ ಬಿಡುಗಡೆ, ಬಗ್ಗಿ ಕಾರು ಕೊಡುಗೆ, ಗಣ್ಯರಿಂದ ಶುಭ ಹಾರೈಕೆ

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನಾಚರಣೆ: ವಿಶೇಷ ಅಂಚೆ ಚೀಟಿ ಬಿಡುಗಡೆ, ಬಗ್ಗಿ ಕಾರು ಕೊಡುಗೆ, ಗಣ್ಯರಿಂದ ಶುಭ ಹಾರೈಕೆ

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನಾಚರಣೆಯನ್ನು ಬುಧವಾರ ಧರ್ಮಸ್ಥಳದಲ್ಲಿ ಸರಳ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು. ಜನ್ಮದಿನದ ಪ್ರಯುಕ್ತ ದೇವಸ್ಥಾನ, ಬೀಡು, ವಸತಿಛತ್ರಗಳು ಸೇರಿದಂತೆ ಕ್ಷೇತ್ರದ ಎಲ್ಲಾ ಕಟ್ಟಡಗಳನ್ನು ಆಕರ್ಷಕ ವಿದ್ಯುದ್ದೀಪಗಳು ಹಾಗೂ ಬಣ್ಣಬಣ್ಣದ ಹೂವುಗಳಿಂದ ಅಲಂಕರಿಸಲಾಗಿತ್ತು. ದೇವಸ್ಥಾನ ಮತ್ತು ಬಸದಿಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಈ ಶುಭ ಸಂದರ್ಭದಲ್ಲಿ, ಪೂಜ್ಯ ಹೆಗ್ಗಡೆಯವರ ಜನ್ಮದಿನದ ಸವಿನೆನಪಿಗಾಗಿ 'ವಂದೇ ಭಾರತಂ' ಪರಿಕಲ್ಪನೆಯಡಿ ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಹಾಗೂ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಯೋಗದಲ್ಲಿ ವೀರವನಿತೆಯರ ಸಂಕ್ಷಿಪ್ತ ಮಾಹಿತಿಯುಳ್ಳ ಸಚಿತ್ರ ಅಂಚೆ ಚೀಟಿಗಳನ್ನು ಬೀಡಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ದಾನಚಿಂತಾಮಣಿ ಅತ್ತಿಮಬ್ಬೆ, ರಣಭೈರವಿ ಅಕ್ಕಾದೇವಿ, ಕಾಳಲಾದೇವಿ, ಕಂತಿ, ಚೌಟರರಾಣಿ ಅಬ್ಬಕ್ಕ ದೇವಿ, ನಾಟ್ಯರಾಣಿ ಶಾಂತಲಾದೇವಿ ಮತ್ತು ಚಂದನಬಾಲೆ ಅವರ ಸಚಿತ್ರ ಅಂಚೆ ಚೀಟಿಗಳು, ವಂದೇ ಮಾತರಂ ಗೀತೆಯ 150 ವರ್ಷಗಳ ಸ್ಮರಣಾರ್ಥ ಹಾಗೂ 2026ರ ಜಿನಸಮ್ಮಿಲನ ನಡೆಯುವ ಸಮ್ಮೇದಶಿಖರ್ಜಿಯ ವಿಷಯಗಳನ್ನೊಳಗೊಂಡ ಒಟ್ಟು ಹತ್ತು ಅಂಚೆಪತ್ರಗಳನ್ನು ಹೆಗ್ಗಡೆಯವರು ಬಿಡುಗಡೆಗೊಳಿಸಿ, ಅಂಚೆ ಇಲಾಖೆ ಮತ್ತು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು. ಈ ವೇಳೆ ಅಂಚೆ ಇಲಾಖೆಯ ನಿರ್ದೇಶಕ ಶ್ರೀಹರ್ಷ ಎನ್., ಪುತ್ತೂರು ಅಂಚೆ ವಿಭಾಗದ ಅಧೀಕ್ಷಕ ರವೀಂದ್ರ ನಾಯ್ಕ, ಹುಬ್ಬಳ್ಳಿಯ ಮಹಾವೀರ ಕುಂದೂರ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ನಾರಾವಿ, ಕಾರ್ಯದರ್ಶಿ ರಶ್ಮಿತಾ ಜೈನ್ ಹಾಗೂ ಆಡಳಿತ ನಿರ್ದೇಶಕ ಬಿ.ಪಿ. ಸಂಪತ್‌ಕುಮಾರ್ ಉಪಸ್ಥಿತರಿದ್ದರು.

ಇದೇ ವೇಳೆ, ಧರ್ಮಸ್ಥಳದ ಭಕ್ತರು ಹಾಗೂ ಬೆಂಗಳೂರಿನ ಅಂಚೆಪಾಳ್ಯದ ಶ್ರೀ ಮಂಜುನಾಥ ಸ್ವಾಮಿ ಬಿಲ್ಡರ್ಸ್ ಮಾಲೀಕ ಬಸವರಾಜ್ ಆರ್. ಅವರು 10 ಸೀಟುಗಳ ಸಾಮರ್ಥ್ಯದ ಬ್ಯಾಟರಿ ಚಾಲಿತ 'ಬಗ್ಗಿ' (ಇ.ವಿ.) ಕಾರನ್ನು ಕ್ಷೇತ್ರಕ್ಕೆ ಕೊಡುಗೆಯಾಗಿ ಅರ್ಪಿಸಿದರು. ಈ ವಾಹನವನ್ನು ವಿಶೇಷಚೇತನರು ವಸತಿಗೃಹಗಳಿಗೆ ತೆರಳಲು ಉಚಿತ ಸೇವೆಗಾಗಿ ಬಳಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು.

ದೇವಳದ ನೌಕರರು, ಊರಿನ ನಾಗರಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಫಲ-ಪುಷ್ಪಗಳ ಹಾರದೊಂದಿಗೆ ಹೆಗ್ಗಡೆಯವರಿಗೆ ಗೌರವಾರ್ಪಣೆ ಮಾಡಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡುಬಿದಿರೆಯ ಕೆ. ಅಭಯಚಂದ್ರ ಜೈನ್, ಪೆರಿಂಜೆ ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂಧರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಡಾ. ಪ್ರಭಾಚಂದ್ರ, ಸುದರ್ಶನ ಜೈನ್ ಬಂಟ್ವಾಳ, ನೋಟರಿ ಶ್ವೇತಾ ಜೈನ್, ಪ್ರಭಾತ್ ಸಿಲ್ಕ್ ಮಾಲೀಕ ಪ್ರಭಾತ್, ಮಾಳ ಹರ್ಷೇಂದ್ರ ಜೈನ್ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಸೇರಿದಂತೆ ಹಲವು ಗಣ್ಯರು ಪೂಜ್ಯ ಹೆಗ್ಗಡೆಯವರಿಗೆ ಜನ್ಮದಿನದ ಶುಭಾಶಯಗಳನ್ನು ಕೋರಿದರು.

 

 

Category
ಕರಾವಳಿ ತರಂಗಿಣಿ