image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿನಲ್ಲಿ ಡೆಲಾಯ್ಟ್ ಇಂಡಿಯಾ ನೂತನ ಕಚೇರಿ ಪ್ರಾರಂಭ; ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶದ ಭರವಸೆ

ಮಂಗಳೂರಿನಲ್ಲಿ ಡೆಲಾಯ್ಟ್ ಇಂಡಿಯಾ ನೂತನ ಕಚೇರಿ ಪ್ರಾರಂಭ; ಸ್ಥಳೀಯ ಪ್ರತಿಭೆಗಳಿಗೆ ಉದ್ಯೋಗಾವಕಾಶದ ಭರವಸೆ

ಮಂಗಳೂರು: ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಯಾದ ಡೆಲಾಯ್ಟ್ ಇಂಡಿಯಾ, ಮಂಗಳೂರಿನ ಕೊಟ್ಟಾರ ಚೌಕಿಯ 'ಪರ್ಲ್‌ವರ್ಕ್ ಟ್ರಯಾಂಗಲ್'ನಲ್ಲಿ ತನ್ನ ನೂತನ ಕಚೇರಿಯನ್ನು ಪ್ರಾರಂಭಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡೆಲಾಯ್ಟ್ ಸೌತ್ ಏಷ್ಯಾದ ಸಿಇಒ ರೋಮಲ್ ಶೆಟ್ಟಿ, "ಡೆಲಾಯ್ಟ್ ಇಂಡಿಯಾದ ಬೆಳವಣಿಗೆಗೆ ಅಸಾಧಾರಣ ಪ್ರತಿಭೆಗಳೇ ಶಕ್ತಿಯಾಗಿದೆ. ಪ್ರತಿಭೆಗಳು ಎಲ್ಲಿದೆಯೋ ಅಲ್ಲಿಯೇ ಅವಕಾಶಗಳನ್ನು ಸೃಷ್ಟಿಸುವ ಮಾರ್ಗಗಳನ್ನು ನಾವು ನಿರಂತರವಾಗಿ ಅನ್ವೇಷಿಸುತ್ತಿದ್ದೇವೆ. ನನ್ನ ಕುಟುಂಬದ ಮೂಲ ಕರ್ನಾಟಕವಾಗಿದ್ದು, ತವರಂತಿರುವ ಮಂಗಳೂರಿನಲ್ಲಿ ಕಚೇರಿ ಪ್ರಾರಂಭಿಸುತ್ತಿರುವುದು ನನಗೆ ವಿಶೇಷ ಅರ್ಥವನ್ನು ಹೊಂದಿದೆ. ಇಲ್ಲಿನ ಪ್ರತಿಭಾವಂತರು ಸಾಂಪ್ರದಾಯಿಕವಾಗಿ ದೊಡ್ಡ ನಗರಗಳಿಗೆ ವಲಸೆ ಹೋಗುತ್ತಿದ್ದರು. ಇದೀಗ ಉದ್ಯೋಗಾವಕಾಶಗಳನ್ನು ಅವರ ಮನೆ ಬಾಗಿಲಿಗೆ ತರುವ ಮೂಲಕ, ವೃತ್ತಿಪರರು ತಮ್ಮ ಕುಟುಂಬ ಮತ್ತು ಸಮುದಾಯದೊಂದಿಗೆ ಬೆರೆತುಕೊಂಡು ಭಾರತ ಹಾಗೂ ಪ್ರಪಂಚದಾದ್ಯಂತದ ಗ್ರಾಹಕರಿಗೆ ಪರಿಣಾಮಕಾರಿ ಯೋಜನೆಗಳಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತದೆ" ಎಂದು ತಿಳಿಸಿದರು.

ಮಂಗಳೂರಿನ ಈ ಕಚೇರಿಯು ಡೆಲಾಯ್ಟ್ ಇಂಡಿಯಾದ ದೇಶದ 27ನೇ ಕಚೇರಿಯಾಗಿದೆ. ಆರಂಭದಲ್ಲಿ ಇಲ್ಲಿ ಸುಮಾರು 250 ವೃತ್ತಿಪರರು ಕಾರ್ಯನಿರ್ವಹಿಸಲಿದ್ದು, ಹಂತ ಹಂತವಾಗಿ ಉದ್ಯೋಗಿಗಳ ಸಂಖ್ಯೆಯನ್ನು 1,000ಕ್ಕೂ ಹೆಚ್ಚಿಸುವ ಯೋಜನೆಯನ್ನು ಸಂಸ್ಥೆ ಹೊಂದಿದೆ. ಇದು ಸಮಗ್ರ ಸಾಮರ್ಥ್ಯ ಮತ್ತು ವಿತರಣಾ ಕೇಂದ್ರವಾಗಿ ಕಾರ್ಯನಿರ್ವಹಿಸಲಿದ್ದು, ಕೃತಕ ಬುದ್ಧಿಮತ್ತೆ (AI), ಡೇಟಾ ಮತ್ತು ಅನಾಲಿಟಿಕ್ಸ್, ಸೈಬರ್ ಸೆಕ್ಯುರಿಟಿ, ಕನ್ಸಲ್ಟಿಂಗ್, ತೆರಿಗೆ, ರಿಸ್ಕ್ ಅಡ್ವೈಸರಿ ಸೇರಿದಂತೆ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ಜಾಗತಿಕ ಗ್ರಾಹಕರಿಗೆ ಸೇವೆ ನೀಡಲಿದೆ.

ಉನ್ನತ ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್ ಹಾಗೂ ವೃತ್ತಿಪರ ಕಾಲೇಜುಗಳ ಬೆಂಬಲದೊಂದಿಗೆ ಮಂಗಳೂರು ಭಾರತದ ಪ್ರಮುಖ ಪ್ರತಿಭಾ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯ ಸರ್ಕಾರದ "ಬಿಯಾಂಡ್ ಬೆಂಗಳೂರು" ಕಾರ್ಯತಂತ್ರದ ಅಡಿಯಲ್ಲಿ 'ಭಾರತದ ಸಿಲಿಕಾನ್ ಬೀಚ್' ಎಂದೇ ಕರೆಯಲ್ಪಡುವ ಮಂಗಳೂರು, ಉತ್ತಮ ಜೀವನಮಟ್ಟ ಮತ್ತು ಕಡಿಮೆ ಪ್ರಯಾಣದ ಅವಧಿಯಿಂದಾಗಿ ವೃತ್ತಿಪರರಿಗೆ ಆಕರ್ಷಕ ತಾಣವಾಗಿದೆ.

ಮುಂದಿನ ದಿನಗಳಲ್ಲಿ ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರತಿಭಾವಂತರನ್ನು ನೇಮಕ ಮಾಡಿಕೊಳ್ಳುವುದರ ಜೊತೆಗೆ, ದೊಡ್ಡ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳೀಯ ಡೆಲಾಯ್ಟ್ ವೃತ್ತಿಪರರು ತಮ್ಮ ತವರಿಗೆ ಮರಳಿ ಕೆಲಸ ಮಾಡಲು ಸಂಸ್ಥೆ ಅವಕಾಶ ಕಲ್ಪಿಸಲಿದೆ. ಕ್ಯಾಂಪಸ್ ಸಂಪರ್ಕ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಕರಾವಳಿ ಕರ್ನಾಟಕದ ಮುಂದಿನ ಪೀಳಿಗೆಯ ಪ್ರತಿಭೆಗಳಿಗೆ ಬೆಂಬಲ ನೀಡಲಾಗುವುದು ಎಂದರು.

Category
ಕರಾವಳಿ ತರಂಗಿಣಿ