ಮಂಗಳೂರು: ಮಳೆಗಾಲದಲ್ಲಿ ಉಂಟಾಗುವ ತೀವ್ರ ಮಣ್ಣಿನ ಸವಕಳಿ ಮತ್ತು ಭೂಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ, ನವಮಂಗಳೂರು ಬಂದರು ಪ್ರಾಧಿಕಾರದ (ಎನ್ಎಂಪಿಎ) ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಘಟಕದ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಂದಿನಿ ನದಿ ತೀರದಲ್ಲಿ ಸುಮಾರು 3,000 ಲಾವಂಚ (ವೆಟಿವರ್/ಖಸ್) ಸಸಿಗಳನ್ನು ನೆಡುವ ಬೃಹತ್ ಪರಿಸರ ಸಂರಕ್ಷಣಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ದೇಶದ ಪ್ರಮುಖ ಕೈಗಾರಿಕಾ ಹಾಗೂ ಮೂಲಸೌಕರ್ಯಗಳ ಭದ್ರತೆಯ ಜೊತೆಗೆ ಪರಿಸರ ಸಂರಕ್ಷಣೆಗೂ ವಿಶೇಷ ಒತ್ತು ನೀಡಿರುವ ಸಿಐಎಸ್ಎಫ್, ಮಹಾನಿರ್ದೇಶಕ ಪ್ರವೀರ್ ರಂಜನ್ ಅವರ ನೇತೃತ್ವದಲ್ಲಿ 2026ರ ಆಗಸ್ಟ್ನಿಂದ ದೇಶವ್ಯಾಪಿ 'ಲಾವಂಚ ನಾಟಿ ಅಭಿಯಾನ'ವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ನದಿ ದಂಡೆಗಳ ಸಂರಕ್ಷಣೆ, ಮಣ್ಣಿನ ಸವಕಳಿ ನಿಯಂತ್ರಣ, ಭೂಕುಸಿತ ತಡೆ ಹಾಗೂ ಅಂತರ್ಜಲ ಮರುಪೂರಣಕ್ಕೆ ಲಾವಂಚ ಹುಲ್ಲು ಅತ್ಯಂತ ಪರಿಣಾಮಕಾರಿ ನೈಸರ್ಗಿಕ ಪರಿಹಾರವಾಗಿದೆ.
ಈ ವಿಶೇಷ ಸಸ್ಯದ ಬೇರುಗಳು ನೆಲದಾಳಕ್ಕೆ ಸುಮಾರು 3 ರಿಂದ 4 ಮೀಟರ್ಗಳಷ್ಟು ನೇರವಾಗಿ ಮತ್ತು ಆಳವಾಗಿ ಬೆಳೆಯುವುದರಿಂದ ನದಿ ತೀರದ ಮಣ್ಣನ್ನು ಅತ್ಯಂತ ಭದ್ರವಾಗಿ ಹಿಡಿದಿಟ್ಟುಕೊಳ್ಳುತ್ತವೆ. ಅಲ್ಲದೆ, ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತಿದ್ದು, ಒಂದು ಲಕ್ಷ ಲಾವಂಚ ಸಸಿಗಳು ಕೇವಲ ಎರಡು ವರ್ಷಗಳಲ್ಲಿ ಸುಮಾರು 20,000 ಪೂರ್ಣ ಬೆಳೆದ ಮರಗಳಿಗೆ ಸಮನಾದ ಇಂಗಾಲವನ್ನು ಹೀರಿಕೊಳ್ಳುವ ಮತ್ತು ಸುತ್ತಮುತ್ತ ತಂಪಾದ ವಾತಾವರಣವನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿವೆ.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ 'ಏಕ್ ಪೇಡ್ ಮಾ ಕೆ ನಾಮ್' ಅಭಿಯಾನಕ್ಕೆ ಪೂರಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಹರಿನಾರಾಯಣ ಆಸ್ರಣ್ಣ, ಪಿಲಿಕುಳ ನಿಸರ್ಗಧಾಮದ ಔಷಧೀಯ ಸಸ್ಯೋದ್ಯಾನದ ಅಧಿಕಾರಿ ಉದಯ ಕುಮಾರ್ ಶೆಟ್ಟಿ ಹಾಗೂ ಎನ್ಎಂಪಿಎ ಸಿಐಎಸ್ಎಫ್ ಉಪ ಕಮಾಂಡೆಂಟ್ ಆರ್.ಪಿ. ಪಾಠಕ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಿಐಎಸ್ಎಫ್ ಸಿಬ್ಬಂದಿ, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಸ್ಥಳೀಯರು ಸೇರಿದಂತೆ ಸುಮಾರು 60 ಮಂದಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ನದಿ ತೀರದುದ್ದಕ್ಕೂ ಲಾವಂಚ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ಮೆರೆದರು.