ಮಂಗಳೂರು: ಆರೋಗ್ಯ ಸಂಪನ್ನ ಸಮಾಜದ ನಿರ್ಮಾಣ, ರಾಷ್ಟ್ರದ ಸುರಕ್ಷತೆ ಹಾಗೂ ಲೋಕಕಲ್ಯಾಣಕ್ಕಾಗಿ ಸನಾತನ ಸಂಸ್ಥೆಯ ವತಿಯಿಂದ ಇದೇ ನವೆಂಬರ್ 29ರ ಭಾನುವಾರ ಉಡುಪಿಯ ಕುಂಜಿಬೆಟ್ಟಿನ ಎಂ.ಜಿ.ಎಂ. ಕಾಲೇಜು ಮೈದಾನದಲ್ಲಿ ಭವ್ಯ 'ಶ್ರೀ ಮಹಾಧನ್ವಂತರಿ ಯಾಗ'ವನ್ನು ಆಯೋಜಿಸಲಾಗಿದೆ ಎಂದು ಯಾಗ ಆಯೋಜನಾ ಸಮಿತಿಯ ಸಂಯೋಜಕರಾದ ಗುರು ಪ್ರಸಾದ್ ಗೌಡ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅಂದು ಮಧ್ಯಾಹ್ನ 3ರಿಂದ ಸಂಜೆ 7ರವರೆಗೆ ಯಾಗ ನಡೆಯಲಿದ್ದು, ಈಗಾಗಲೇ 9,000ಕ್ಕೂ ಅಧಿಕ ಭಕ್ತರು ಉಚಿತವಾಗಿ ನೋಂದಣಿ ಮಾಡಿಕೊಂಡಿದ್ದು, ಸುಮಾರು 15,000ಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಕ್ರಿ.ಶ. 1026ರಲ್ಲಿ ಮಹಮದ್ ಘಜ್ನಿಯ ಆಕ್ರಮಣದಿಂದ ಸೋಮನಾಥ ದೇವಾಲಯ ಧ್ವಂಸಗೊಂಡಾಗ, ಅದರ ಪವಿತ್ರ ಜ್ಯೋತಿರ್ಲಿಂಗದ ಕೆಲವು ಭಾಗಗಳನ್ನು ಶ್ರದ್ಧಾವಂತ ಅರ್ಚಕರು ನೂರಾರು ವರ್ಷಗಳ ಕಾಲ ರಹಸ್ಯವಾಗಿ ಸಂರಕ್ಷಿಸಿಕೊಂಡು ಬಂದಿದ್ದರು. ತಂಜಾವೂರಿನ ವೇದಕುಲಪತಿ ಶ್ರೀ ಜಿ.ಕೆ. ಸೀತಾರಾಮನ್ ಗುರೂಜಿಯವರು ಈ ಪವಿತ್ರ ಅವಶೇಷಗಳನ್ನು ಜಗತ್ತಿಗೆ ಪರಿಚಯಿಸಿದ್ದು, ಅವುಗಳಲ್ಲಿ ನಾಲ್ಕು ಅವಶೇಷಗಳನ್ನು ಸನಾತನ ಸಂಸ್ಥೆಗೆ ಹಸ್ತಾಂತರಿಸಲಾಗಿದೆ. ಇವುಗಳನ್ನು ಉಡುಪಿಯ ಯಾಗದಲ್ಲಿ ಪ್ರದರ್ಶನಕ್ಕೆ ಇಡಲಾಗುತ್ತಿದ್ದು, ಭಕ್ತರಿಗೆ ಈ ಪ್ರಾಚೀನ ಅವಶೇಷಗಳ ದರ್ಶನದ ಅಪೂರ್ವ ಅವಕಾಶ ದೊರೆಯಲಿದೆ.
ನಂತರ ಮಾತನಾಡಿದ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ರಮಾನಂದ ಗೌಡ ಅವರು, ಭಗವಾನ್ ಶ್ರೀ ಧನ್ವಂತರಿಯು ಆಯುರ್ವೇದದ ಅಧಿದೇವತೆಯಾಗಿದ್ದು, ಆರಾಧನೆಯು ಆರೋಗ್ಯ, ಆಯುಷ್ಯ ಮತ್ತು ಲೋಕಕಲ್ಯಾಣದ ಸಂಕಲ್ಪವನ್ನು ಒಳಗೊಂಡಿದೆ ಎಂದರು. ಪ್ರಸ್ತುತ ಎದುರಾಗುತ್ತಿರುವ ಸಾಂಕ್ರಾಮಿಕ ರೋಗಗಳ ಭೀತಿ, ಹವಾಮಾನ ವೈಪರೀತ್ಯ, ಆಹಾರ ಭದ್ರತೆಯ ಆತಂಕ ಹಾಗೂ ಜಾಗತಿಕ ಸಂಘರ್ಷಗಳ ಸವಾಲುಗಳ ಹಿನ್ನೆಲೆಯಲ್ಲಿ ಸಮೂಹ ಪ್ರಾರ್ಥನೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಪ್ರವೇಶಕ್ಕೆ ಉಚಿತ ಮತ್ತು ಕಡ್ಡಾಯ ನೋಂದಣಿ ವ್ಯವಸ್ಥೆ ಇದ್ದು, ಆಸಕ್ತರು ಆನ್ಲೈನ್ ಮೂಲಕ ([https://www.sanatanrashtrashankhnad.in/events/shri-dhanvantari-mahayaag?lang=kn](https://www.sanatanrashtrashankhnad.in/events/shri-dhanvantari-mahayaag?lang=kn)) ಅಥವಾ ಸನಾತನ ಸಂಸ್ಥೆಯ (9342599299) ಹಾಗೂ ಸ್ವಾಗತ ಸಮಿತಿಯ (9343017001) ಸಂಪರ್ಕ ಸಂಖ್ಯೆಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಪತ್ರಿಕಾಗೋಷ್ಠಿಯಲ್ಲಿಎಮ್ ಜೆ ಶೆಟ್ಟಿ, ನಂದನ್ ಮಲ್ಯ ಮತ್ತು ಲಕ್ಷ್ಮಿ ಪೈ ಉಪಸ್ಥಿತರಿದ್ದರು.