image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಜಿಎಂಯು ಹಳೆಯ ವಿದ್ಯಾರ್ಥಿಗಳ ಶೃಂಗಸಭೆ: ನಾಲ್ಕು ಹೊಸ ಅಂತಾರಾಷ್ಟ್ರೀಯ ಘಟಕಗಳ ಉದ್ಘಾಟನೆ

ಜಿಎಂಯು ಹಳೆಯ ವಿದ್ಯಾರ್ಥಿಗಳ ಶೃಂಗಸಭೆ: ನಾಲ್ಕು ಹೊಸ ಅಂತಾರಾಷ್ಟ್ರೀಯ ಘಟಕಗಳ ಉದ್ಘಾಟನೆ

ಯುಎಇ/ತುಂಬೆ : ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು) ತನ್ನ ಹಳೆಯ ವಿದ್ಯಾರ್ಥಿಗಳ ಶೃಂಗಸಭೆ 2026 ಅನ್ನು ಅಜ್ಮಾನ್‌ನ ತುಂಬೆ ಮೆಡಿಸಿಟಿ ಆವರಣದಲ್ಲಿ ಆಯೋಜಿಸಿ, ನಾಲ್ಕು ಹೊಸ ಅಂತಾರಾಷ್ಟ್ರೀಯ ಹಳೆಯ ವಿದ್ಯಾರ್ಥಿ ಘಟಕಗಳನ್ನು ಉದ್ಘಾಟಿಸಿತು ಮತ್ತು ಜಾಗತಿಕ ಆರೋಗ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ 28 ಪದವೀಧರರನ್ನು ಗೌರವಿಸಿತು. ಕಾರ್ಯಕ್ರಮದಲ್ಲಿ ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯಿದ್ದೀನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ಜಿಎಂಯು ಕುಲಪತಿ ಪ್ರೊ. ಮಂದಾ ವೆಂಕಟರಮಣ, ಹಳೆಯ ವಿದ್ಯಾರ್ಥಿ ವ್ಯವಹಾರಗಳ ಮುಖ್ಯಸ್ಥೆ ನೌಶೀನ್ ಸಲ್ಮಾ ಮತ್ತು ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಒಮರ್ ನಬಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಕೆನಡಾ, ಓಮನ್, ಕತಾರ್ ಮತ್ತು ಸ್ವೀಡನ್ ದೇಶಗಳಲ್ಲಿ ಹೊಸ ಘಟಕಗಳನ್ನು ಆರಂಭಿಸಲಾಗಿದ್ದು, ಈ ಮೂಲಕ ವಿದೇಶಗಳಲ್ಲಿರುವ ಜಿಎಂಯು ಘಟಕಗಳ ಸಂಖ್ಯೆ ೧೦ಕ್ಕೆ ಏರಿದೆ. ಅಮೆರಿಕ, ಯುಕೆ, ಭಾರತ, ಜರ್ಮನಿ, ಬಹರೈನ್ ಮತ್ತು ಪೋಲೆಂಡ್‌ಗಳಲ್ಲಿ ಈಗಾಗಲೇ ಘಟಕಗಳಿವೆ. ಆಯಾ ದೇಶಗಳಲ್ಲಿ ನೆಲೆಸಿರುವ ಡಾ. ರಿಜ್ವಾನ್ ರಶೀದ್ (ಕೆನಡಾ), ಡಾ. ಫರ್ಹಾನಾ ಅಲ್ ಒಥ್ಮಾನಿ (ಓಮನ್), ಡಾ. ಜ್ಯೂಲ್ ಚೌಧರಿ (ಕತಾರ್) ಮತ್ತು ನರ್ಮೀನ್ ಅನೀಸ್ (ಸ್ವೀಡನ್) ಅವರು ಹೊಸ ಘಟಕಗಳ ನೇತೃತ್ವ ವಹಿಸಲಿದ್ದಾರೆ.

ವಿಶ್ವವಿದ್ಯಾಲಯದ ೨೮ನೇ ವರ್ಷದ ಅಂಗವಾಗಿ '೨೮ ಜಿಎಂಯು ಐಕಾನ್ಸ್' ಪುಸ್ತಕವನ್ನು ಬಿಡುಗಡೆ ಮಾಡಿ ಸಾಧಕರನ್ನು ಸನ್ಮಾನಿಸಲಾಯಿತು. ಇದಕ್ಕೂ ಮುನ್ನ 'ಜಿಎಂಯು ಅಲುಮ್ನಿ – ಫ್ಯೂಚರ್ ರೆಡಿ' ಎಂಬ ಸಂವಾದ ಕಾರ್ಯಕ್ರಮದಲ್ಲಿ ಆರು ಮಂದಿ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ೧೯೯೮ರಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿದ ಡಾ. ತುಂಬೆ ಮೊಯಿದ್ದೀನ್ ಅವರಿಗೆ ಹಳೆಯ ವಿದ್ಯಾರ್ಥಿಗಳು ಕೃತಜ್ಞತಾಪೂರ್ವಕವಾಗಿ ಸ್ಮರಣಿಕೆ ನೀಡಿದರು. ತುಂಬೆ ಗ್ರೂಪ್‌ನ ಎಲ್ಲಾ ಉದ್ಯೋಗಗಳಲ್ಲಿ ಶೇ. ೩ರಷ್ಟು ಹುದ್ದೆಗಳನ್ನು ಜಿಎಂಯು ಹಳೆಯ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ಡಾ. ಮೊಯಿದ್ದೀನ್ ಘೋಷಿಸಿದರು.

ಪ್ರಸ್ತುತ ಜಿಎಂಯು ಏಳು ಕಾಲೇಜುಗಳು ಮತ್ತು ೫೫ ಮಾನ್ಯತೆ ಪಡೆದ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, 117ಕ್ಕೂ ಹೆಚ್ಚು ರಾಷ್ಟ್ರಗಳ ವಿದ್ಯಾರ್ಥಿಗಳು ಮತ್ತು ೫೬ ದೇಶಗಳ ಸಿಬ್ಬಂದಿ ಇದ್ದಾರೆ. 5000ಕ್ಕೂ ಹೆಚ್ಚು ಪದವೀಧರರು ವಿಶ್ವದಾದ್ಯಂತ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯೂನಿವರ್ಸಿಟಿ ರ್‍ಯಾಂಕಿಂಗ್ಸ್ 2027ರ ಅಂತಾರಾಷ್ಟ್ರೀಯ ದೃಷ್ಟಿಕೋನ ವಿಭಾಗದಲ್ಲಿ 99.4 ಅಂಕಗಳೊಂದಿಗೆ ಜಿಎಂಯು ಮೊದಲ ಸ್ಥಾನ ಪಡೆದಿದ್ದು, ಜೂನ್ 2026ರಲ್ಲಿ ಯುಕೆಯ ಕ್ವಾಲಿಟಿ ಅಶ್ಯೂರೆನ್ಸ್ ಏಜೆನ್ಸಿ (ಕ್ಯೂಎಎ) ಸಂಸ್ಥೆಯ ಮಾನ್ಯತೆಯೂ ದೊರೆತಿದೆ. ವಿದ್ಯಾರ್ಥಿಗಳು 3100ಕ್ಕೂ ಹೆಚ್ಚು ಹಾಸಿಗೆಗಳ ಏಳು ಶೈಕ್ಷಣಿಕ ಆಸ್ಪತ್ರೆಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವೈದ್ಯಕೀಯ, ದಂತ ವೈದ್ಯಕೀಯ, ಫಾರ್ಮಸಿ, ನರ್ಸಿಂಗ್, ಹೆಲ್ತ್ ಸೈನ್ಸಸ್, ಹೆಲ್ತ್‌ಕೇರ್ ಮ್ಯಾನೇಜ್‌ಮೆಂಟ್, ಆರೋಗ್ಯ ಕ್ಷೇತ್ರದಲ್ಲಿ ಎಐ ಮತ್ತು ಪಶುವೈದ್ಯಕೀಯ ವಿಭಾಗಗಳ 2027ರ ಸ್ಪ್ರಿಂಗ್ ಮತ್ತು ಫಾಲ್ ಪ್ರವೇಶಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗೆ gmu.ac.ae ವೆಬ್‌ಸೈಟ್ ಸಂಪರ್ಕಿಸಬಹುದು.

 

Category
ಕರಾವಳಿ ತರಂಗಿಣಿ