ಮಂಗಳೂರು : 'ಕಾರ್ಯಕ್ರಮ ಸಂಘಟನೆ ಮತ್ತು ಉತ್ಸವಗಳಲ್ಲಿ ಹೊಸ ಪರಿಕಲ್ಪನೆ ತರುವ ಅಗತ್ಯವಿದೆ. ಭಾಷೆ ಬಳಕೆಯಲ್ಲಿದ್ದರೆ ಮಾತ್ರ ಉಳಿಯುತ್ತದೆ. ಕನ್ನಡದ ಶುದ್ಧ ರೂಪ ನಮ್ಮ ಕಲೆಗಳಲ್ಲಿದ್ದು, ಭಾಷೆಯ ಉಳಿವಿಗೆ ಯಕ್ಷಗಾನ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
'ಯಕ್ಷಾಂಗಣ ಮಂಗಳೂರು' ವೇದಿಕೆ, ಮಂಗಳೂರು ವಿವಿಯ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದಲ್ಲಿ ರವಿವಾರ ನಡೆದ 14ನೇ ವರ್ಷದ 'ಯಕ್ಷಗಾನ ತಾಳಮದ್ದಳೆ ಸಪ್ತಾಹ-2026' ಉದ್ಘಾಟಿಸಿ ಅವರು ಮಾತನಾಡಿದರು. ಆಸ್ವಾದನೆಯ ಸ್ವರೂಪ ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಯಕ್ಷಗಾನಕ್ಕೆ ಪೋಷಣೆ ಅಗತ್ಯವಿದ್ದು, ಯಕ್ಷಾಂಗಣ ಆ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಮಾತನಾಡಿ, ತಾಳಮದ್ದಳೆ ಪ್ರಕಾರವನ್ನು ಉಳಿಸಿ ಬೆಳೆಸಲು ನಿರಂತರ ಪ್ರೋತ್ಸಾಹದ ಅಗತ್ಯವಿದೆ ಎಂದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಕರಾವಳಿಯ ಭಾಷಾ ಶುದ್ಧತೆಗೆ ಯಕ್ಷಗಾನವೇ ಕಾರಣ ಎಂದರು.
ಇದೇ ಸಂದರ್ಭದಲ್ಲಿ ಉದ್ಯಮಿ ಹಾಗೂ ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ ಥಾಣೆ ಅವರಿಗೆ 2026ನೇ ಸಾಲಿನ 'ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ' ನೀಡಿ ಸನ್ಮಾನಿಸಲಾಯಿತು. ಪತ್ನಿ ಶಿಲ್ಪಾ ವಿ. ಶೆಟ್ಟಿ ಅವರೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಪಾದನೆಯ ಒಂದು ಭಾಗ ಸಮಾಜ ಮತ್ತು ಸಂಸ್ಕೃತಿಯ ಒಳಿತಿಗೆ ವಿನಿಯೋಗವಾಗುವುದರಲ್ಲಿ ಸಂತೃಪ್ತಿ ಇದೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಸಿಎ ಎಸ್.ಎಸ್. ನಾಯಕ್, ಅಶೋಕ್ ಎಂ. ಶೆಟ್ಟಿ, ಡಾ. ಜಯವಂತ ನಾಯಕ್, ಹೇಮಂತ್ ಶೆಟ್ಟಿ ಹಾಗೂ ಡಾ. ಸತೀಶ್ ಕೊಣಾಜೆ ಉಪಸ್ಥಿತರಿದ್ದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿದರು, ರವೀಂದ್ರ ರೈ ಕಲ್ಲಿಮಾರು ಸನ್ಮಾನ ಪತ್ರ ವಾಚಿಸಿದರು, ತೋನ್ಸೆ ಪುಷ್ಕಳ ಕುಮಾರ್ ನಿರೂಪಿಸಿ, ಸುಧಾಕರ ರಾವ್ ಪೇಜಾವರ ವಂದಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ 'ಬಂಗಾರ್ದ ಉರೆ' ತುಳು ತಾಳಮದ್ದಳೆ ಹಾಗೂ ನಂತರ 'ಚಂದ್ರ ವಂಶೋದಯ' ಯಕ್ಷಗಾನ ಕೂಟ ನಡೆಯಿತು.