ಉಜಿರೆ: ಕ್ಯಾಸೆಟ್ಗಳ ಅಬ್ಬರ, ಮೈಕ್ಗಳ ಶಬ್ದ ಮಾಲಿನ್ಯ, ಸಿನಿಮಾ ಹಾಡು ಹಾಗೂ ನೃತ್ಯಗಳಿಲ್ಲದೆ ಅತ್ಯಂತ ಸರಳವಾಗಿ ಹಾಗೂ ಶಿಸ್ತುಬದ್ಧವಾಗಿ ಆಯೋಜಿಸಲಾಗಿದ್ದ ವಿವಾಹದ ‘ಸರಳ ಸ್ನೇಹಕೂಟ’ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗಸಂಸ್ಥೆಯಾದ ‘ಸಿರಿ’ ಗ್ರಾಮೋದ್ಯೋಗ ಸಂಸ್ಥೆಯ ಸಿಇಒ ಕೆ.ಎನ್. ಜನಾರ್ಧನ ಮತ್ತು ಉಷಾ ಜನಾರ್ಧನ ದಂಪತಿ ತಮ್ಮ ದ್ವಿತೀಯ ಪುತ್ರ ಕೆ.ಜೆ. ಸುದರ್ಶನ್ ಹಾಗೂ ದಿವ್ಯಾ ಅವರ ವಿವಾಹವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನೆರವೇರಿಸಿದ್ದರು. ಇದರ ಪ್ರಯುಕ್ತ ಸ್ಥಳೀಯ ಆಪ್ತರು, ಅಭಿಮಾನಿಗಳು ಹಾಗೂ ಸಿಬ್ಬಂದಿಗಾಗಿ ಬೆಳ್ತಂಗಡಿಯ ಮಂಜುನಾಥಸ್ವಾಮಿ ಕಲಾಭವನದಲ್ಲಿ ಭಾನುವಾರ ಈ ಸ್ನೇಹಕೂಟವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವರ ಕೆ.ಜೆ. ಸುದರ್ಶನ್ ತಮ್ಮ ತಂದೆ-ತಾಯಿಯ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ವ್ಯಕ್ತಪಡಿಸಿ, ಅವರೇ ತಮಗೆ ಪ್ರತ್ಯಕ್ಷ ದೇವರು ಎಂದು ಕೃತಜ್ಞತೆ ಸಲ್ಲಿಸಿದರು. ಪುತ್ರನ ಮಾತುಗಳಿಂದ ಭಾವುಕರಾದ ಕೆ.ಎನ್. ಜನಾರ್ಧನ ಮತ್ತು ಉಷಾ ಜನಾರ್ಧನ ದಂಪತಿ ಆನಂದಭಾಷ್ಪ ಸುರಿಸಿ, ಇಂತಹ ಮಗನನ್ನು ಪಡೆದ ತಾವೇ ಭಾಗ್ಯವಂತರು ಎಂದು ಸಂತಸ ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಉಷಾ ಜನಾರ್ಧನ ಅವರು ಸುಶ್ರಾವ್ಯವಾಗಿ ಗಣೇಶ ಸ್ತುತಿ ಹಾಡಿದರು ಹಾಗೂ ಸೊಸೆಯನ್ನು ಮಗಳಂತೆಯೇ ಪ್ರೀತಿಯಿಂದ ನೋಡಿಕೊಳ್ಳುವುದಾಗಿ ತಿಳಿಸಿದರು.
ಹಿರಿಯ ದಂಪತಿ ಹಾಗೂ ನವದಂಪತಿ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರತಿಯೊಬ್ಬರನ್ನೂ ಆತ್ಮೀಯವಾಗಿ ಸ್ವಾಗತಿಸಿ, ಸತ್ಕರಿಸಿದರು. ನೆರೆದಿದ್ದವರಿಗೆ ಸರಳ, ಶುದ್ಧ ಹಾಗೂ ಶುಚಿ-ರುಚಿಯಾದ ಸಸ್ಯಾಹಾರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭದಲ್ಲಿ ಉಜಿರೆ ಶ್ರೀ ಜನಾರ್ದನಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಶರತ್ಕೃಷ್ಣ ಪಡ್ವೇಟ್ನಾಯ, ಶಾಸಕ ಕೆ. ಹರೀಶ್ ಪೂಂಜ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್, ರಶ್ಮಿತಾ ಜೈನ್ ನಾರಾವಿ ಸೇರಿದಂತೆ ಹಲವು ಗಣ್ಯರು ಹಾಗೂ ಹಿರಿಯರು ಪಾಲ್ಗೊಂಡು ನೂತನ ದಂಪತಿಗೆ ಶುಭ ಹಾರೈಸಿದರು.